ಎಲುಗಟ್ಟು, ಕಶೇರುಕಗಳ: ಬಹುತೇಕ ಪ್ರಾಣಿಗಳಲ್ಲೂ ಕಶೇರುಕಗಳಲ್ಲೂ ಮೈಯ ಸಾಮಾನ್ಯ ಆಕಾರವನ್ನು ಉಳಿಸಿಕೊಂಡಿರಲು ಕೆಲವು ಊತಕಗಳು ಒಂದುಗೂಡಿ ಗಟ್ಟಿಯಾಗಿರುವ ರಚನೆಯ ಕಟ್ಟು (ಸ್ಕೆಲಿಟನ್). ಸತ್ತಮೇಲೆ ಉಳಿದೆಲ್ಲ ಮೆದುವಾದ ಭಾಗಗಳೂ 

ಹಾಳಾದರೂ ಇದು ಮಾತ್ರ ಒಂದಷ್ಟು ಕಾಲ ಉಳಿದಿರುವುದು. ಮೇಲ್ತರದ ಕಶೇರುಕಗಳ ಎಲುಗಟ್ಟಿನಲ್ಲಿ ಎಲುಬುಗಳು ಕೂಡಿಕೊಂಡು ಇನ್ನಷ್ಟು ಗಡುಸಾಗಿರುತ್ತದೆ. ಪ್ರಾಣಿಗಳ ಆಕಾರ, ಗಾತ್ರಗಳಿಗೆ ಬಹುಮಟ್ಟಿಗೆ ಇದೇ ಕಾರಣ. ಒಳಗಿರುವ ಜೀವಾಳದ ಅಂಗಗಳಿಗೆ ರಕ್ಷಣೆ 

ಒದಗಿಸುವುದು ಇನ್ನೊಂದು ಅನುಕೂಲ. ಸ್ನಾಯುಗಳ ಚಲನೆಗೆ ಸನ್ನೆಗಳಾಗುವ ಭಾಗಗಳಿವೆ. ಸುಣ್ಣಾಂಶಕ್ಕೆ ಮೂಳೆಗಳೇ ತೌರು. ಹಲವಾರು ಅಕಶೇರುಕ ಪ್ರಾಣಿಗಳಲ್ಲಿ ಕಾಪಿಡಲೂ ಊರೆ ಕೊಡಲೂ ಹೊರಚಿಪ್ಪು (ಎಕ್ಸೊಸ್ಕೆಲಿಟನ್) ಇದ್ದರೆ ಕಶೇರುಕಗಳಲ್ಲಿ ಒಳಗಿನ 

ಎಲುಗಟ್ಟೂ ಬಹಳ ಮಾರ್ಪಾಟಾಗಿರುವ ಇಲ್ಲವೇ ಪುರ್ತಿ ಅಣಗಿರುವ ಹೊರಚಿಪ್ಪು ಉಗುರು, ಕೂದಲು, ಹಲ್ಲುಗಾಜು (ಎನಾಮೆಲ್)-ಇವುಗಳ ರೂಪದಲ್ಲಿ ಉಳಿದಿರುವುದು.
ಬೆನ್ನೆಲುಬಿನ ಕಂಬ: ದಪ್ಪನೆಯ ಹಿಂಪುಟಿಕ ಬೆನ್ನೆಲುನಡುವಣ ಬಟ್ಟುಗಳು (ಡಿಸ್ಕಸ್)ಮತ್ತಿತರ ತಂತುಗಟ್ಟುಗಳಿಂದ (ಲಿಗಮೆಂಟ್ಸ್‌) ಒಂದಕ್ಕೊಂದು ಕೂಡಿರುವ ಬೆನ್ನೆಲುಬುಗಳ ನೆಟ್ಟನೆಯ ಸಾಲು (ವರ್ಟಿಬ್ರಲ್ ಕಾಲಂ). ಇದನ್ನು ನಟ್ಟೆಲುಬು, ಮಟ್ಟೆಲುಬು, ನಿಟ್ಟೆಲುಬು, 

ಬೆನ್ನುಕಂಬ ಎನ್ನುವುದೂ ಉಂಟು. ಮುಖ್ಯವಾಗಿ ಇದು ಮುಂಡ, ಕೊರಳುಗಳ ಹಿಂಭಾಗದ ನಡುವೆ ಇದ್ದು ಇದರ ಮೇಲ್ಗಡೆ ತಲೆ ಬುರುಡೆ ಕುಳಿತಿರುವುದು. ಇವಿಷ್ಟೂ ಸೇರಿದರೆ ಅಚ್ಚಿನ (ಆಕ್ಸಿಯಲ್) ಎಲುಗಟ್ಟು ಆಗುವುದು. ಸಾಮಾನ್ಯವಾಗಿ ಒಂದೊಂದು ಬೆನ್ನಲುಬಲ್ಲೂ 

ಮುಂದುಗಡೆ ದಪ್ಪನೆಯ ಕಾಯವೂ (ಬಾಡಿ) ಹಿಂದುಗಡೆ ನರದ ಕಮಾನೂ (ನ್ಯೂರಲ್ ಆರ್ಚ್) ಇರುವುವು.
ಬೆನ್ನಲುನಡುವಣ ಬಟ್ಟುಗಳೊಂದಿಗೆ ಕಾಯಗಳು ಒಂದರ ಮೇಲೊಂದು ಜೋಡಿಸಿರುವುದರಿಂದ ಅವು ಮೈ ಭಾರ ಹೊರುವ ಕಂಬದಂತಿರುವುವು. ಒರಸೆಯಲ್ಲಿ ರುವ ಬೆನ್ನೆಲುಬಿನ ಕಾಯಗಳಿಗೂ ನರದ ಕಮಾನಿಗೂ ನಡುವೆ ಬೆನ್ನೆಲುಬಿನ ಕಂಬದ ಎರಡು ಪಕ್ಕಗಳಲ್ಲೂ 

ಬೆನ್ನುಹುರಿಗೆ ಸಂಬಂಧಿಸಿರುವ ಜೋಡಿ ನರಗಳು ಹೊರಬೀಳುತ್ತವೆ. ಈ ನರದ ಕಮಾನುಗಳು ಬೆನ್ನುಹುರಿಯನ್ನೂ ಕೆಳಗಿನ ಬೆನ್ನುಹುರಿಯ ನರಗಳನ್ನೂ ಕೊಂಚಮಟ್ಟಿಗೆ ಕಾಪಿಡುತ್ತವೆ. ಒಂದೊಂದು ನರದ ಕಮಾನಿನಲ್ಲೂ ಉರು ಆಕಾರದ ಎರಡು ತೊಟ್ಟುಗಾಲುಗಳು 

(ಪೆಡಿಕಲ್ಸ್‌). ಹಿಂದುಗಡೆ ನಡುವೆ ಒಂದಾಗುವ ಎರಡು ರೇಕುಪರೆಗಳು (ಲಮೈನ), ತೊಟ್ಟುಗಾಲು ಮತ್ತು ರೇಕುಪರೆ ಸೇರುವೆಡೆಯಲ್ಲಿ ಅಡ್ಡನೆಯ ಚಾಚು, ಕೀಲುಗೂಡಿಸುವ ಚಾಚುಗಳ (ಪ್ರೋಸೆಸಸ್) ಇವೆ.  ಮೇಲಿನ ಕೆಳಗಿನ ಕೀಲುಗೂಡಿಸುವ ಚಾಚುಗಳ ನಡುವೆ 

ಕೀಲೋಳಿನ (ಸೈನೋವಿಯಲ್) ಕೀಲುಗಳಿವೆ.  ಮುಳ್ಳಿನ ಚಾಚುಗಳ ಸಾಲು ಹಿಂದುಗಡೆ ನಟ್ಟನಡುವೆ ಇರುವುದೇ ಬೆನ್ನೆಲುಬಿನ ಕಂಬವನ್ನು ಮುಟ್ಟಿದಾಗ ಕೈಗೆ ತಾಕುವುದು.
ಎಳೆಮಗುವಿನ ಬೆನ್ನೆಲುಬಿನ ಕಂಬದಲ್ಲಿರುವ 33 ಬಿಡಿಯಾಗಿರುವ ಬೆನ್ನೆಲುಬುಗಳಲ್ಲಿ ಕೆಲವು ದೊಡ್ಡವರಾದ ಮೇಲೆ ಒಂದುಗೂಡಿ ಬಿಡಿಯಾದವು ಕೇವಲ 26 ಉಳಿಯುತ್ತವೆ. ಬೆನ್ನಲುಬುಗಳು ಇರುವೆಡೆಯಂತೆ, ಕೊರಳಿನ (ಸರ್ವೈಕಲ್) ಎದೆಗೂಡಿನ (ತೊರ್ಯಾಸಿಕ್), 

ಸೊಂಟದ (ಲಂಬರ್), ಪಾವನಿಯ (ಸೇಕ್ರಲ್) ಕೋಕೆಲುವಿನ (ಕಾಕ್ಸಿಜಯಲ್) ಬೆನ್ನೆಲುಬುಗಳೆಂದು ಹೆಸರಾಗಿದೆ. ಎಳೆಮಗುವಿನಲ್ಲಿ ಪಾಪನಿಯವು ಐದೂ ಕೋಕೆಲುವಿನವು ನಾಲ್ಕೂ ಇದ್ದುವು. ದೊಡ್ಡವರಲ್ಲಿ ಒಂದೊಂದೇ ಇರುತ್ತವೆ. ಅಲ್ಲದೆ ಕೊರಳಿನವು 7, ಎದೆಗೂಡಿನವು 

12, ಸೊಂಟದವು 5 ಇರುತ್ತವೆ.
ಬೆನ್ನೆಲುಬುಗಳು: ಅಡ್ಡನೆಯ ಚಾಚುಗಳಲ್ಲಿ ಒಂದೊಂದು ಕೊರೆಗಂಡಿ (ಫೋರಮನ್) ಇರುವವೇ ಕೊರಳಿನ ಬೆನ್ನೆಲುಬುಗಳು. 7ನೆಯದನ್ನು ಬಿಟ್ಟರೆ, ಮಿದುಳಿನ ಒಂದು ಭಾಗಕ್ಕೆ ರಕ್ತ ಒದಗಿಸುವ ಬೆನ್ನೆಲುಬಿನ ಧಮನಿ ಇವುಗಳ ಮೂಲಕ ಮೇಲಕ್ಕೆ ಸಾಗುತ್ತದೆ. ಒಂದನೆಯ 

ಬೆನ್ನೆಲುಬಾದ ಎಲುಮೇರುವಿನಲ್ಲಿ (ಅಟ್ಲಾಸ್) ಮಾತ್ರ ಕಾಯವಿರದೆ ಉಂಗುರ ರೂಪದಲ್ಲಿದೆ. ಇದರ ಇಬ್ಬದಿಗಳೂ ದಪ್ಪನಾಗಿದ್ದು ಮೇಲುಗಡೆ ತಲೆಬುರುಡೆಯ ಹೆಡತಲೆಯ (ಆಕ್ಸಿಪಿಟಲ್) ಮೂಳೆಯೊಂದಿಗೂ ತಳಗಡೆ 2ನೆಯ ಬೆನ್ನೆಲುಬೊಂದಿಗೂ ಕೀಲುಗೂಡುವುದು. 

2ನೆಯ ಬೆನ್ನೆಲುಬಿನ ಕಾಯದ ಮೇಲೆ ದಪ್ಪ ಗೂಟದಂತಿರುವ ಹಲ್ಲುತೆರ ಚಾಚೂ ಇದೆ. ತಲೆಯನ್ನು ಪಕ್ಕಗಳಿಗೆ ತಿರುಗಿಸಿದಾಗ ಎಲುಮೇರು ಸುತ್ತ ತಿರುಗಲು ಈ ಚಾಚು ತಿರುಗಣೆಯಾಗಿದೆ. ಎದೆಗೂಡಿನ ಮೊದಲಿನ 9 ಬೆನ್ಮೂಳೆಗಳ ಕಾಯಗಳ ಇಬ್ಬದಿಗಳಲ್ಲೂ 

ಪಕ್ಕೆಲುಬುಗಳ ತಲೆಗಳು ಕೂಡುವ ಸಣ್ಣ ಕೀಲುಮೊಗಗಳಿವೆ (ಫೇಸೆಟ್ಸ್‌). ಸೊಂಟದ ಬೆನ್ನೆಲುಬುಗಳ ಅಡ್ಡನೆಯ ಚಾಚುಗಳಲ್ಲಿ ಕೊರೆಗಂಡಿಗಳೂ ಇಲ್ಲ. ಪಕ್ಕೆಲುಬುಗಳು ಕೂಡುವ ಕೀಲುಮೊಗಗಳೂ ಇಲ್ಲ. ಇಡೀ ಮುಂಡದ ಭಾರವನ್ನೆಲ್ಲ ಹೊರಲೋಸುಗ ಇವುಗಳ ಕಾಯಗಳು 

ದಢೂತಿಯಾಗಿವೆ.
5 ಬೆನ್ನೆಲುಬುಗಳು ಒಂದುಗೂಡಿ ತ್ರಿಕೋಣಾಕಾರ ತಳೆದಿರುವುದು ಪಾವನಿ (ಸೇಕ್ರಂ) ಮೂಳೆ. ಇಬ್ಬದಿಗಳಲ್ಲೂ ಎರಡೆರಡು ಟೊಂಕೆಲುಬುಗಳೊಂದಿಗೆ ಸೇರಿ ಕಿಳ್ಗುಳಿಯ ನಡುಕಟ್ಟು (ಪೆಲ್ವಿಕ್ ಗರ್ಡಲ್) ಆಗಿದೆ. ಪಾವನಿ ಮೂಳೆ ಮುಂದುಗಡೆ ಕುಳಿಯಾಗಿದ್ದು, ಮೂಲದ 5 

ಮೂಳೆಗಳ ಗುರುತಿನ ಅಡ್ಡಗೆರೆಗಳು ಕಾಣುವುವು. ಎರಡು ಪಕ್ಕಗಳಲ್ಲೂ ಇರುವ ಕಂಡಿಗಳಲ್ಲಿ ಇರುವ ಪಾವನಿಯ 4 ನರಗಳ ಮುಂದಣ ಕವಲುಗಳು ತೂರುತ್ತವೆ. ಉಬ್ಬಿರುವ ಹಿಂಭಾಗದಲ್ಲಿ 4 ಮುಳ್ಳಿನ ಚಾಚುಗಳನ್ನು ಕೊಂಚವಾಗಿ ಗುರುತಿಸಬಹುದು. ಹಿಂದಣ 4 

ಕಂಡಿಗಳಲ್ಲಿ ಪಾವನಿಯ ನರಗಳ ಹಿಂದಣ ಕವಲುಗಳು ಸಾಗುತ್ತವೆ. ಈ ಕಂಡಿಗಳ ಆಚೆ ಪಕ್ಕದ ಭಾಗಕ್ಕೆ ಮಗ್ಗುಲಿನ ಪಿಂಡಿ (ಲ್ಯಾಟರಲ್ ಮಾಸ್) ಎಂದಿದೆ.  ಆಯಾ ಪಕ್ಕಗಳ ಟೊಂಕೆಲುಬೊಂದಿಗೆ (ಇಲಿಯಂ) ಕೀಲುಗೂಡಲು ದೊಡ್ಡ ಒರಟು ಕೀಲುಮೊಗವಿದೆ.  ಬೇರೆ 

ಸಸ್ತನಿಗಳವಕ್ಕಿಂತಲೂ ಮಾನವನ ಪಾವನಿ ಅಗಲವಾಗಿದ್ದು ನೆಟ್ಟಗೆ ನಡೆವಾಗಿನ ಮೈಭಾರವನ್ನು ಇಡೀ ಬೆನ್ನೆಲುಬಿನ ಕಂಬದ ಮೂಲಕ ಹೊರಲು ತಕ್ಕದಾಗಿದೆ.  ಹೆಣ್ಣಿನ ಪಾವನಿ ಗಂಡಿನದಕ್ಕಿಂತಲೂ ಅಗಲವಾಗಿರುವುದರಿಂದ ಇಡೀ ಕಿಳ್ಗುಳಿಯ ಒಳ ಅಳತೆ 

ಹೆಚ್ಚಾಗಿರುವುದು.  4 ಬೆನ್ನೆಲುಬುಗಳು ಒಂದುಗೂಡಿ ಆಗಿರುವ ಕೋಕಿಲು (ಕಾಕ್ಸಿಕ್ಸ್‌) ಸಾಮಾನ್ಯವಾಗಿ ಬಾಲದಂತೆ ಪಾವನಿಯ ಕೆಳಕೊನೆಗೆ ಕೀಲುಗೂಡಿರುತ್ತದೆ.
ಇಡೀ ಬೆನ್ನೆಲುಬಿನ ಕಂಬ: ಬೆನ್ನೆಲುಬುಗಳನ್ನು ಇರುವೆಡೆಗಳಲ್ಲಿ ಇರಿಸಿಡಲು ಬಲವಾದ ತಂತುಗಟ್ಟುಗಳಿವೆ, ಬೆನ್ನೆಲುನಡುವಣ ಬಿಲ್ಲೆಗಳು, ಕಾಯಗಳ ನಡುವಣ ಬಟ್ಟುಗಳು ಹಿಂದಣ ಅಲ್ಲದೆ ಮುಂದಣ ನೀಳವಾದ ತಂತುಗಟ್ಟುಗಳು (ಲಿಗಮೆಂಟ್ಸ್‌) ರೇಕುಪರೆಗಳ ನಡುವಣ 

ಹಳದಿ ತಂತುಗಟ್ಟು ಇವು ಮುಖ್ಯವಾದುವು. ಮೇಲಿನ ಕೊನೆಯಿಂದ ಕೆಳಕೊನೆಯ ತನಕ ಬೆನ್ನೆಲುಬಿನ ಕಂಬ ಹೇಗೆಂದರೆ ಹಾಗೆ ಬಾಗುವ ಬೆನ್ನೆಲುಬುಗಳ ಕಾಯಗಳ ನಡುವೆ ಮೆತ್ತನೆಯ ಬೆನ್ನೆಲುನಡುವಣ ಬಟ್ಟುಗಳಿವೆ. ಒಂದೊಂದು ಬಟ್ಟಿನಲ್ಲೂ ನಟ್ಟನಡುವೆ 

ತಂತುಮೆಲ್ಲೆಲುಬಿನ (ಫೈಬ್ರೊ ಕಾರ್ಟಿಲೇಜ್) ನ್ಯೂಕ್ಲಿಯಸಿನ ಪಪ್ಪು (ನ್ಯೂಕ್ಲಿಯಸ್ ಪಲ್ಪೋಸಸ್) ಇದೆ.  ಬೆನ್ನೆಲುಬುಗಳ ಕಾಯಗಳನ್ನು ಒಂದಕ್ಕೊಂದು ಬಿಗಿಯಾಗಿ ಕಟ್ಟುವುದು ಈ ತಂತುಮೆಲ್ಲೆಲುಬು. ನ್ಯೂಕ್ಲಿಯಸಿನ ಪಪ್ಪು ಅರೆದ್ರವವಾಗಿದ್ದು ಒತ್ತಡ ಪೆಟ್ಟುಗಳನ್ನು ತಡೆದು 

ಒಂಗುವಂತಿರುವುದು. ಈ ಒತ್ತಡ, ಪೆಟ್ಟು ತಡೆಯಲಾರದಂತಾದರೆ ತಂತುಮೆಲ್ಲೆಲುಬು ಬಿರಿದು ಸೀಳಿ ನ್ಯೂಕ್ಲಿಯಸಿನ ಪಪ್ಪು ಹೊರಟುಕೊಂಡು ಬೆನ್ನುಹುರಿಯನ್ನು ಒತ್ತಿ ಬೆನ್ನು ವಿಪರೀತ ನೋವಿಡುವುದು. ಇದಕ್ಕೆ ಜಾರಿದ ಬಟ್ಟು ಎಂದು ಹೆಸರು. ಬೆನ್ನೆಲುಬಿನ ಕಂಬ, ಇಡೀ 

ಎಲುಗಟ್ಟಿನ ನಡುಗಡೆಯ ಅಚ್ಛಿನಂತಿದ್ದು ತಲೆ, ಮುಂಡಗಳ ಭಾರವನ್ನೇ ಅಲ್ಲದೆ ಕೈಗಳದನ್ನೂ ಹೊರುತ್ತದೆ. ಈ ಕಂಬವನ್ನು ಆಡಿಸುವ ಸ್ನಾಯುಗಳೊಂದಿಗೆ ತಲೆ, ತೋಳುಗಳವೂ ಇದಕ್ಕೆ ತಗುಲಿಕೊಂಡಿವೆ.
ನಿಂತಿರುವ ನೇರ ನಿಲುವಿನಲ್ಲಿ ಬೆನ್ನೆಲುಬಿನ ಕಂಬದಲ್ಲಿ ಸಾಮಾನ್ಯವಾಗಿ ಮೈಯ ಹಿಂದು ಮುಂದಣ ಸಮತಲದಲ್ಲಿ ಕೆಲವು ಕೊಂಕುಗಳಿರುತ್ತವೆ. ಅಡ್ಡನೆಯ ಸಮತಲದಲ್ಲೂ ಕೆಲವಿದೆ. ಆಗತಾನೇ ಹುಟ್ಟಿದ ಹಸುಗೂಸಿನ ಬೆನ್ನೆಲುಬಿನ ಕಂಬದಲ್ಲಿ ಮುಂದುಗಡೆ ಎರಡು 

ತಗ್ಗುಗಳಿದ್ದು ಪಾವನಿ ಬೆನ್ನೆಲುಬಿನ ಬಳಿ ಸೇರುತ್ತವೆ. ಕೂಸು ತಲೆ ಎತ್ತುವಂತಾದಾಗ ಮುಂದಕ್ಕೆ ಉಬ್ಬುವ ಕೊಂಕು ಕೊರಳಲ್ಲಿ ಆಗುವುದು. ಎಳೆಕೂಸು ನಡೆವಂತಾದಾಗ ಸೊಂಟದಲ್ಲೂ ಹೀಗೇ ಮುಂದಕ್ಕೆ ಉಬ್ಬಿಕೊಳು ವುದು. ಆದ್ದರಿಂದಲೇ ಬೆಳೆದವರು, ನೆಟ್ಟ ನಿಲುವಿನಲ್ಲಿ 

ನಡೆವಾಗ ಬೆನ್ನೆಲುಬಿನ ಕಂಬದಲ್ಲಿ ಒಂದಾದ ಮೇಲೊಂದರಂತೆ ಉಬ್ಬುತಗ್ಗು ಗಳಿರುತ್ತವೆ. ಈ ಕೊಂಕುಗಳಿಂದ ಪಾವನಿಯ ಮೇಲಿನ ಭಾರ ಹೊರಲು ಸ್ನಾಯುಗಳ ಪಾತ್ರ ತೀರ ಕಡಿಮೆಯಾಗಿರುವುದು. ಪಕ್ಕಕ್ಕೆ ಓಲುವ ಕೊಂಕುಗಳು ಎಲ್ಲರಲ್ಲೂ ಕಂಡುಬರುವುವು. 

ಬಲಗೈಯನ್ನು ಹೆಚ್ಚು ವಾಡಿಕೆಯಾಗಿ ಬಳಸುವುದ ರಿಂದ ಬಲಕ್ಕೆ ಕೊಂಚ ಉಬ್ಬಿರಬಹುದು.
ಬೆನ್ನೆಲುಬಿನ ಕಂಬದಲ್ಲಿ ಮೂರು ಚಲನೆಗಳು ಸಾಧ್ಯ. ಹಿಂದಕ್ಕೂ ಮುಂದಕ್ಕೂ ಬಾಗುವುದು; ಪಕ್ಕಗಳಿಗೆ ಬಾಗುವುದು, ಬೆನ್ನೆಲುಬುಗಳ ಕಾಯಗಳ ಮೇಲೆ ನೆಟ್ಟಗೆ ಸುತ್ತುತಿರುಗುವುದು. ಬೆನ್ನೆಲುಬಿನ ಕಂಬದ ಬೇರೆ ಬೇರೆ ಮಟ್ಟಗಳಾದ ಕೊರಳು, ಎದೆಸೊಂಟಗಳ ನಡುವೆ. 

ಸೊಂಟ ಪಾವನಿ ಕೂಡುವೆಡೆಗಳಲ್ಲಿ ಚಲನೆ ಬಹಳ. ಕೀಲುಗೂಡಿಸುವ ಚಾಚುಗಳ ಕೀಲುಗಳ ಸಮತಲಗಳು ಬೆನ್ನೆಲುನಡುವಣ ಬಟ್ಟುಗಳ ಹಿಗ್ಗುವ ಗುಣ, ಸ್ನಾಯು ತಂತುಗಟ್ಟುಗಳ ಪುಟಿಸುವ ಗುಣ ಇವು ಈ ಚಲನೆಗಳಿಗೆ ಮಿತಿಗಳು. ಪಕ್ಕೆಲುಬುಗಳು ಅಡ್ಡಿಯಾಗುವುದರಿಂದ 

ಎದೆಗೂಡಿನಲ್ಲಿ ಬೆನ್ನೆಲುಬಿನ ಕಂಬದ ಚಲನೆಗೆ ಹೆಚ್ಚು ಮಿತಿಗಳಿವೆ.
ಎದೆಗೂಡಿನ ಎಲುಗಟ್ಟು: ಎದೆಚಕ್ಕೆ (ಸ್ಟರ್ನಂ), ಪಕ್ಕೆಲುಬುಗಳೊಂದಿಗಿನ ಮೆಲ್ಲೆಲುಬುಗಳೂ ಎದೆಗೂಡಿನ ಬೆನ್ನೆಲುಬುಗಳೂ ಇದರಲ್ಲಿದೆ. ಬೆನ್ನೆಲುಬುಗಳ ಕಾಯಗಳ ನೆಟ್ಟ ಸಾಲು ಎದೆಗೂಡೊಳಕ್ಕೆ ಮುಂಚಾಚಿರುವುದರಿಂದ ಇಬ್ಬದಿಯಲ್ಲೂ ಹಳ್ಳವಾಗಿದೆ.
ಮೇಲಿನ ಕೈಪಿಡಿಗ (ಮೆನುಬ್ರಿಯಂ), ನಡುವಣ ಕಾಯ, ಕೆಳಗಣ ಕೂರಸಂದ (ಕ್ಸೈಫಾಯ್ಡ್‌) ಹೀಗೆ ಎದೆಚಕ್ಕೆಯಲ್ಲಿ 3 ಭಾಗಗಳಿವೆ. ಎಳೆಯರಲ್ಲಿನ ಇದರ ಕಾಯದಲ್ಲಿ 4 ಬಿಡಿ ಭಾಗಗಳಿದ್ದ ಗುರುತಿನ ಅಡ್ಡಗೆರೆಗಳು ಹಿಂದೂ ಮುಂದೂ ಕಾಣುತ್ತವೆ. ಮೇಲಿನ 7 

ಪಕ್ಕೆಲುಬುಗಳೊಂದಿಗೆ ಕೀಲುಗೂಡಲು ಪಕ್ಕಗಳ ಅಂಚುಗಳಲ್ಲಿ 7 ಕಚ್ಚುಗಳಿವೆ (ನಾಚೆಸ್). ಕೈಪಿಡಿಗಿದ ಮಗ್ಗಲುಗಳಲ್ಲಿ ಕೀಲಿಕ (ಕ್ಲಾವಿಕಲ್) ಮೂಳೆಗಳು ಕೂಡಲು ಹಳ್ಳಗಳಿವೆ. ಕೂರಸಂದ ಚಾಚು ತೀರ ವಯಸ್ಸಾಗುವ ತನಕ ಮೆಲ್ಲೆಲುಬಾಗೆ ಉಳಿದಿರುವುದು.
ಎದೆಗೂಡಿನ ಬೆನ್ನಲುಬುಗಳೊಂದಿಗೆ ಕೀಲುಗೂಡುವ, ಪಕ್ಕೆಲುಬುಗಳ 12 ಜೋಡಿಗಳು ಬಹಳ ಎಲುಗಟ್ಟುಗಳಲ್ಲಿರುವುವು. ಕೆಲವೇಳೆ, ಪಕ್ಕೆಲುಬುಗಳು ಕೊರಳಲ್ಲೂ ಸೊಂಟದಲ್ಲೂ ಇರಬಹುದು. ಬೆನ್ನೆಲುಬಿನ ಕಂಬದಿಂದ ಪಕ್ಕೆಲುಬುಗಳು ಮೊದಲು ಹಿಂದಕ್ಕೂ ಆಮೇಲೆ 

ಮುಂದಕ್ಕೆ ಕೆಳಗಡೆಗೂ ಸಾಗಿ ಇನ್ನೂ ಕೆಳಮಟ್ಟದಲ್ಲಿರುವ ಪಕ್ಕೆಲುಬಿನ ಮೆಲ್ಲೆಲುಬುಗಳೊಂದಿಗೆ ಕೂಡಿಕೊಳ್ಳುತ್ತವೆ. ಮೊದಲ 7 ಪಕ್ಕೆಲುಬುಗಳ ನಿಜವಾದ ಪಕ್ಕೆಲುಬುಗಳಾಗಿ ಹೀಗಿರುವುವು. ಹೀಗೆ ಮುಂಗೊನೆಗಳು ಪಕ್ಕೆಲುಬಿನ ಮೆಲ್ಲೆಲುಬೊಂದಿಗೆ ಸೇರದೆ ಹಾಗೇ 

ಉಳಿದಿರುವ ಕೆಳಗಿನ ಹುಸಿ ಪಕ್ಕೆಲುಬುಗಳು 8, 9, 10ನೆಯ ಪಕ್ಕೆಲುಬುಗಳು, ಎದೆ ಚಕ್ಕೆಯನ್ನು ನೇರವಾಗಿ ಬಿಡಿಯಾಗಿ ಕೂಡದೆ ಮೇಲಿನ ಮೆಲ್ಲೆಲುಬೊಂದಿಗೆ ಕೂಡಿಕೊಳ್ಳುತ್ತವೆ. 11, 12ನೆಯವುಯಾವುದನ್ನೂ ಸೇರದೆ ಇರುವುದರಿಂದ ತೇಲುವ ಪಕ್ಕೆಲುಬುಗಳು 

ಎನಿಸಿವೆ. ಒಂದು ಮಾದರಿ ಪಕ್ಕೆಲುಬಿನಲ್ಲಿ ತಲೆ, ಕತ್ತು, ಕಾವುಗಳಿವೆ (ಷ್ಯಾಫ್ಟ್‌). ಅಕ್ಕಪಕ್ಕದ ಎರಡು ಬೆನ್ನೆಲುಬುಗಳ ಕಾಯಗಳೊಂದಿಗೆ ತಲೆ ಕೀಲುಗೂಡುತ್ತದೆ.    
ಬೆನ್ನೆಲುಬಿನ ಅಡ್ಡನೆಯ ಚಾಚಿನೊಂದಿಗೆ ಕೀಲುಗೂಡುವ ಪಕ್ಕೆಲುಬಿನ ಒಂದು ಗುಬಟಿಗೂ (ಟ್ಯೂಬರ್ಕಲ್) ತಲೆಗೂ ನಡುವೆ ಮೋಟಾಗಿ ದಪ್ಪನಾದ ಕತ್ತು ಇದೆ. ಇದರಾಚೆ ಎದೆಗೂಡಿನ ಸುತ್ತ ಬಾಗುವ ಕಾಂಡವಿದೆ. ಒಳಗಡೆ ಕೆಳ ಅಂಚಿನಲ್ಲಿ ನರ, ರಕ್ತನಾಳಗಳು ಸಾಗಲು 

ಉದ್ದಕ್ಕೂ ತಗ್ಗು ಇದೆ.
ಕೈಕಾಲುಗಳಎಲುಗಟ್ಟು: ಸಾಮಾನ್ಯ ಜೋಡಣೆಯಲ್ಲಿ ಕೈಕಾಲುಗಳು ಒಂದನ್ನೊಂದು ಹೋಲಿದರೂ ರಚನೆಯ ವಿವರದಲ್ಲೂ ಮುಂಡಕ್ಕೆ ತಗುಲಿಕೊಂಡಿರುವ ರೀತಿಯೂ ಇವುಗಳ ನಿಜಗೆಲಸಗಳೂ ಬೇರೆ ಬೇರೆ. ಮೈ ಭಾರ ಹೊರುವ ಹೊಣೆಯಿರದೆ, ಕೈಗಳು ಕೇವಲ 

ಹಿಡಿದುಕೊಳ್ಳುವ ಅಂಗಗಳಾಗಿವೆ. ನಡಿಗೆಯಲ್ಲಿ ಮೈಯನ್ನು ಮುಂದೂಡುವುದೇ ಅಲ್ಲದೆ, ಮುಂದಕ್ಕೆ ಬಿದ್ದು ಹೋಗದ ಹಾಗೂ ಕಾಲುಗಳು ನಿಲ್ಲಿಸುವ ಅಂಗಗಳಾಗಿವೆ. ಕೈಕಾಲುಗಳು ನಡುಕಟ್ಟುಗಳ (ಗಡ್ರ್ಲ್‌ಸ್) ಮೂಲಕ ಅಚ್ಚಿನ ಎಲುಗಟ್ಟಿಗೆ ತಗುಲಿಕೊಂಡಿವೆ. ಮೇಲಿನದು 

ಹೆಗಲಿನ ನಡುಕಟ್ಟು, ಕೆಳಗಿನದು ಕಿಳ್ಗುಳಿಯ (ಪೆಲ್ದಿಕ್) ನಡುಕಟ್ಟು. ಹೆಗಲದ (ಸ್ಕ್ಯಾಪುಲ), ಕೀಲಕಗಳಿರುವ ಮೇಲಿನದು ಬಹುಮಟ್ಟಿಗೆ ಎದೆಗೂಡಿನ ಮೇಲೆ ಆಡುವಂತಿರುವುದು. ಅಲ್ಲದೆ ಕೈ ತೋಳು ಕೂಡ ನಡುಕಟ್ಟಿನ ಮೇಲೆ ಬಹುಮಟ್ಟಿಗೆ ಎಲ್ಲ ದಿಕ್ಕುಗಳಲ್ಲೂ 

ಆಡಿಸುವಂತಿರುತ್ತದೆ. ಇದರ ಚಲನೆಗಳಿಗೆ ಬೇರೆ ಬೇರೆ ಹೆಸರುಗಳಿವೆ. ಮುಂಚಾಚುವುದು ಮಡಿಸಿಕೆ (ಫ್ಲೆಕ್ಷನ್); ಹಿಂಚಾಚುವುದು ಚಾಚಿಕೆ (ಎಕ್ಸ್‌ಟೆನ್ಷನ್); ಅವಯವವನ್ನು ಮುಂಡದ ನಡುಗಡೆಗೆ ತಂದರೆ ಒಳಸರಿಕೆ (ಅಡಕ್ಷನ್); ಮುಂಡದಿಂದ ದೂರಕ್ಕೆ ಸರಿಸುವುದು 

ದೂರಸರಿಕೆ (ಅಬ್ಡಕ್ಷನ್); ಎಡ, ಬಲಗಳಿಗೆ ಅವಯವವನ್ನು ತಿರುಗಿಸುವುದು (ರೊಟೇಷನ್); ಕೊನೆಯದಾಗಿ, ಇವೆಲ್ಲ ಚಲನೆಗಳನ್ನೂ ಸೇರಿಸಿ ಸುತ್ತಲೂ ಆಡಿಸುವುದು, ಸುತ್ತಿರುಗಣಿ (ಸರ್ಕಂಡಕ್ಷನ್). ಎದೆಗೂಡಿನ ಎಲುಗಟ್ಟಿಗೂ ಈ ನಡುಕಟ್ಟಿಗೂ ಇರುವ ಒಂದೇ ಒಂದು 

ಸಂಬಂಧ ಕೀಲಕ ಮೂಳೆ. ಇದು ಎದೆಚಕ್ಕೆಯ ಕೈ ಪಿಡಿಗದ ಪಕ್ಕಕ್ಕೆ ಕೀಲುಗೂಡಿಸುವುದು. 
ಪಾವನಿ ಮೂಳೆಯೊಂದಿಗೆ ಕೂಡಿ ಭದ್ರವಾಗಿರುವ ಕಿಳ್ಗುಳಿಯ ನಡುಕಟ್ಟಾಗಿರುವ ರೊಂಡಿಯೆಲುಬೊಂದಿಗೆ ಕಾಲುಗಳು ಕೀಲುಗೂಡುತ್ತವೆ. ಪಾವನಿ ಮೂಳೆ ಮೇಲೆ ಬೀಳುವ ಮುಂಡದ ಭಾರವನ್ನೆಲ್ಲ ರೊಂಡಿಯೆಲುಬಿನ ಮೂಲಕ ತೊಡೆಲುಬಿನ (ಫೀಮರ್) ಅರೆಗುಂಡು ತಲೆಗೆ 

ಸಾಗಿಸುತ್ತದೆ. ಇದರ ಎದುರಾಗಿ ಕಾಲುಗಳ ಚಲನೆಯ ಬಲವನ್ನು ಇದೇ ಕಿಳ್ಗುಳಿಯ ನಡುಕಟ್ಟು ಮುಂದಕ್ಕೆ ಸಾಗಿಸುವುದು. ಹೆಗಲಿನ ಕೀಲಲ್ಲಿದ್ದ ಹಾಗೇ ರೊಂಡಿ ಕೀಲಲ್ಲೂ ಕಾಲು ಹಲವು ದಿಕ್ಕುಗಳಲ್ಲಿ ಆಡುವುದಾದರೂ ಇದಕ್ಕೆ ಕೊಂಚ ಮಿತಿಯಿದೆ. 
ಕೈಕಾಲುಗಳಲ್ಲಿ ಒಂದೊಂದರಲ್ಲೂ, ಹತ್ತಿರದ, ನಡುವಣ, ದೂರಂಚಿನ (ಪೆರಿಫೆರಲ್) ಭಾಗಗಳಿವೆ. ಹತ್ತಿರದ ತುಂಡಿನಲ್ಲಿ ಒಂದು ನೀಳ ಮೂಳೆಯಿದೆ. ಕೈಯಲ್ಲಿರುವುದು ತೋಳ್ಮೂಳೆ (ಹ್ಯೂಮೆರಸ್), ಕಾಲಲ್ಲಿ ತೊಡೆಲುಬು.
ನಡುವಣ ತುಂಡಿನಲ್ಲಿ ಎರಡು ಮೂಳೆಗಳಿವೆ. ಮುಂದೋಳಲ್ಲಿ ಆರೆಲು (ರೇಡಿಯಸ್), ಮೊಣೆಲುಬು (ಅಲ್ನ) ; ಕಾಲಲ್ಲಿ ಕಣಕಾಲೆ (ಟಿಬಿಯ), ಸೂಚಿಲುಕ (ಫಿಬುಲ). ಹತ್ತಿರದ ತುಂಡಿಗೂ ನಡುವಣ ತುಂಡಿಗೂ ನಡುವೆ ಕೀಲುಮೊಳೆ ಕುತ್ತಿಯಂತಿದೆ (ಹಿಂಜ್). ಮೇಲಿನ ಅವಯವದ್ದು 

ಮೊಣಕೈಗೀಲು, ಕೆಳಗಿನದು ಮಂಡಿಕೀಲು. ಪುರ್ತಿ ಚಾಚಿನದಾಗಿದ್ದನ್ನು ಬಿಟ್ಟರೆ ಮಂಡಿಯಲ್ಲಿ ಕಾಲನ್ನು ಒಂದಿಷ್ಟು ಸುತ್ತಿರುಗಿಸಬಹುದಾದರೂ ಮೊಣಕೈ ಕೀಲಿನಲ್ಲಿ ಅಷ್ಟೊಂದು ಸಾಧ್ಯವಿಲ್ಲ. ನಡುವಣ ತುಂಡಿನ ಎರಡು ಮೂಳೆಗಳ ಚಲನೆ ಕೈಕಾಲುಗಳಲ್ಲಿ ಬೇರೆ ಬೇರೆ. 

ಮುಂದೋಳಲ್ಲಿನ ಆರೆಲು, ಮೊಣೆಲುಬುಗಳ ನಡುವೆ ಬೋರಲಾಗಿಸುವುದೂ (ಪ್ರೋನೇಷನ್) ಅಂಗತ್ತನಾಗಿಸುವುದೂ (ಸೂಪಿನೇಷನ್) ಆಗುವುದಾದರೂ ಕಾಲಿನಲ್ಲಿ ಹಾಗೆ ಸುತ್ತಿರುಗಿಸುವಂತಿಲ್ಲ.
ಕೈ, ಪಾದಗಳೇ ಎರಡೂ ಅವಯವಗಳ ಕೊನೆಯ ತುಂಡುಗಳು. 1. ಸಣ್ಣ ಮೂಳೆಗಳ ಸಾಲುಗಳಾಗಿ ಮಣಿಕಟ್ಟಿನಲ್ಲಿ ಮುಂಗೈಯೆಲುಬುಗಳು (ಕಾರ್ಪಲ್ ಬೋನ್ಸ್‌), ಹರಡಿನಲ್ಲಿ ಮುಂಗಾಲೆಲುಬುಗಳು (ಟಾರ್ಸಸ್); 2. ಉದ್ದನೆಯ ಮೂಳೆಗಳು ಕೈಯಲ್ಲಿ 

ಅಂಗೈಯೆಲುಬುಗಳೂ (ಮೆಟಕಾರ್ಪಲ್ಸ್‌) ಪಾದದಲ್ಲಿ ಅಂಗಾಲೆಲುಬುಗಳೂ (ಮೆಟಟಾರ್ಪಲ್ಸ್‌); 3. ಸಾಮಾನ್ಯವಾಗಿ ಬೆಟ್ಟು, ಬೆರಳು ಎನಿಸಿಕೊಳ್ಳುವವೂ ಇವುಗಳಲ್ಲಿವೆ. ಮುಂದೋಳಿನ ಆರೆಲು ಮೊಣೆಲುಬುಗಳೊಂದಿಗೆ ಮಣಿಕಟ್ಟಿನ ಮುಂಗೈಯೆಲುಬುಗಳು ಕೀಲುಗೂಡಿ 

ಅಡ್ಡನೆಯ ಅಚ್ಚಿನಲ್ಲಿ, ಅಂದರೆ ಮಣಿಕಟ್ಟು ಮಡಿಸುವ ಚಾಚುವ ಚಲನೆಗಳು ಸಾಧ್ಯ. ಇವುಗಳೊಂದಿಗೆ ಅಂಗೈಯನ್ನು ಒಳಸರಿಸುವುದೂ ದೂರಸರಿಸುವುದೂ ಆಗುವುದು.  ಹರಡಿನಲ್ಲಿ ಮುಂಗಾಲೆಲುಬುಗಳು ಕಣಕಾಲೆ, ಸೂಚಿಲುಕ ಮೂಳೆಗಳೊಂದಿಗೆ ಕೂಡುವ ಕೀಲಿನಲ್ಲಿ 

ಕೇವಲ ಮಡಿಸುವುದು ಚಾಚುವುದಕ್ಕೆ ಮಾತ್ರ ಮಿತಿಗೊಂಡಿದೆ. ಪಾದದಲ್ಲಿ ಕೆಲವು ಅಂಗಾಲೆಲುಬುಗಳ ನಡುವೆ ಒಂದಿಷ್ಟು ಚಲನೆ ಆಗಬಹುದು. ಪಾದದ ತಳವನ್ನು ಒಳಮೊಗವಾಗುವಂತೆ ತಿರುಗಿಸುವುದಕ್ಕೆ ಒಳತಿರುವು (ಇನ್ವರ್ಷನ್) ಎಂದೂ ಹೊರಮೊಗವಾಗುದುವುದಕ್ಕೆ 

ಹೊರತಿರುವು (ಎವರ್ಷನ್) ಎಂದೂ ಇವೆ. ಈ ತಿರುವುಗಳಿಂದ ನೆಲದ ಸೊಟ್ಟುಗಳಿಗೆ ತಕ್ಕಂತೆ ಪಾದದ ತಳ ಹೊಂದಿಕೊಳ್ಳುವಂತಿರುತ್ತದೆ.
ಕೈಕಾಲುಗಳ ಬೆರಳುಗಳ ಚಲನೆಗಳು ಬಹುಮಟ್ಟಿಗೆ ಒಂದೇ ತೆರನು.  ಆದರೆ ಹೆಬ್ಬೆರಳಿನ ಅಂಗೈಯೆಲುಬಿಗೂ ಮಣಿಕಟ್ಟಿನ ಒಂದು ಮುಂಗೈಯೆಲುಬಿಗೂ ನಡುವಣ ಕೀಲಿನಲ್ಲಿ ಸುತ್ತಿರುಗಿಸುವಂತಿದೆ. ಕಾಲಿನ ಹೆಬ್ಬೆಟ್ಟಿನಲ್ಲಿ ಹೀಗೆ ಮಾಡುವಂತಿಲ್ಲ. ಒಟ್ಟಿನಲ್ಲಿ ಕೈಯಲ್ಲಿನ 

ಬೆರಳುಗಳಲ್ಲಿನಷ್ಟು ಸರಾಗ ಚಲನೆಗಳು ಪಾದದಲ್ಲಿ ಸಾಧ್ಯವಿಲ್ಲ.
ಮೇಲಿನ ಅವಯವ: ಹೆಗಲಲ್ಲಿರುವ ಕೀಲಿಕ, ಹೆಗಲದಲ (ಸ್ಕ್ಯಾಪುಲ), ತೋಳೆಲುಬು, ಮುಂದೋಳಿನ ಆರೆಲು, ಮೊಣೆಲಬುಗಳೂ ಕೈಯಲ್ಲಿ ಹಲವು ಸಣ್ಣಮೂಳೆಗಳು ಇದರಲ್ಲಿವೆ.
ಕೀಲಿಕ: ಈ ಕೊರಳೆಲುಬು (ಜತ್ರು) ಎದೆಚಕ್ಕೆಯ ಮೇಲ್ಕೊನೆಯಿಂದ ಅಡ್ಡನಾಗಿದ್ದು ಹೆಗಲದಲ ತೀರ ಆಚಿನ ಚಾಚು, ಹೆಗಲ್ಕೊನೆಯಲ್ಲಿ(ಅಕ್ರೋಮಿಯಾನ್) ಕೀಲುಗೂಡು ವುದು. ಇದು ವಿಶಿಷ್ಟವಾದ ಆಕಾರದಲ್ಲಾಗಿದೆ. ಹೆಂಗಸರಲ್ಲಿ ಕೋಮಲವಾಗಿದ್ದರೂ, ಒಳ್ಳೆಯ 

ಕಟ್ಟುಮಸ್ತಾಗಿರುವ ಗಂಡಸರಲ್ಲಿ ಜೋರಾಗಿರುವುದು. ಇದರ ಆಚೆ ಕೊನೆ ಚಪ್ಪಟೆಯಾಗಿದೆ. ಇದರ ಈಚೆ ಕೊನೆ, ಎದೆಚಕ್ಕೆ ಒಂದನೆಯ ಪಕ್ಕೆಲುಬು ಇವುಗಳ ನಡುವೆ ಬಲವಾದ ತಂತುಗಟ್ಟುಗಳು ಬಿಗಿದಿವೆ. ಕೀಲಿಕದ ಕಾವಿಗೆ ಹೆಗಲಿನ ನಡುಕಟ್ಟಿನ ಸ್ನಾಯುಗಳು 

ತಗುಲಿಕೊಂಡಿರುತ್ತವೆ. 
ಹೆಗಲದಲ: ಎದೆಯ ಹಿಂದುಗಡೆ 2ನೆಯದರಿಂದ 8ನೆಯ ಪಕ್ಕೆಲುಬುಗಳ ನಡುವಣ ಮಟ್ಟದಲ್ಲಿರುವ ಈ ಚಪ್ಪಟೆ ಮೂಳೆ ತ್ರಿಕೋನಾಕಾರದಲ್ಲಿದೆ.  ಹಳ್ಳವಾಗಿರುವ ಇದರ ಮುಂದಣ ಮೇತಲ ಪಕ್ಕೆಲುಬುಗಳ ಕಡೆಗಿದೆ. ಇದರ ಹಿಂದಣ ಮೇತಲದಲ್ಲಿ ಐಮೂಲೆಯಾಗಿ ದೊಡ್ಡ 

ಏಣಾದ ಮುಳ್ಳುಚಾಚು(ಸ್ಪೈನ್) ಇರುವುದರಿಂದ, ಮುಳ್ಳುಚಾಚುಮೇಲಣ (ಸುಪ್ರಸ್ಪೈನಸ್), ಮುಳ್ಳುಚಾಚು ಕೆಳಗಣ (ಇನ್ಫ್ರಸ್ಪೈನಸ್) ತಗ್ಗುಗಳಾಗಿದೆ (ಫಾಸ), ತೋಳನ್ನು ತಿರುಗಿಸುವ ಸ್ನಾಯುಗಳು ಈ ಮುಳ್ಳುಚಾಚಿಗೂ, ಇವೆರಡು ತಗ್ಗುಗಳಿಗೂ ತಗುಲಂಟಿವೆ.  

ಮುಳ್ಳುಚಾಚು ಮುಂದಕ್ಕೆ ಕಮಾನಾಗಿ ಚಾಚಿಕೊಂಡು ಅಗಲನ್ನೆಯ ಹೆಗಲ್ಕೊನೆಯಾಗುತ್ತದೆ. ತೋಳನ್ನು ಆಡಿಸುವಾಗ ಹೆಗಲನ್ನು ಹಿಡಿದಿಡಲೋ ಆಡಿಸಲೋ ಇರುವ ಸ್ನಾಯುಗಳು ಹೆಗಲಗಲದ ಅಂಚುಗಳಿಗೆ ತಗುಲಿಕೊಂಡಿರುವುವು.  ಹೆಗಲದಲದ ಮೂರು ಕೋನಗಳಲ್ಲಿ 

ಹೊರಗೆನದರಲ್ಲಿ ದಪ್ಪನಾಗಿ ಆಳವಿಲ್ಲದ ಕುಳಿಯಿಂದ (ಗ್ಲಿನಾಯ್ಡ್‌) ತಗ್ಗು ಇರುವುದು. ತೋಳ್ಮೂಳೆಯ ಗುಂಡುತಲೆ ಈ ತಗ್ಗಿನೊಂದಿಗೆ ಕೂಡಿಯೇ ಹೆಗಲಿನ ಕೀಲು ಆಗಿರುತ್ತದೆ. ಕುಳಿಯಿಂದ ತಗ್ಗಿನ ಮೇಲೆ ತೂಗುವಂತೆ ಕೊಕ್ಕಂದ ಚಾಚು (ಕೊರನಾಯ್ಡ್‌ ಪ್ರೋಸೆಸ್) ಇದೆ.
ತೋಳ್ಮೂಳೆ: ಮಾದರಿಯಾದ ನೀಳ ಮೂಳೆಯಾದ್ದರಿಂದ ಇದಕ್ಕೂ ಒಂದು ಕಾವು, ಎರಡು ಹಿಗ್ಗಿದ ಕೊನೆಗಳಿವೆ. ಮೇಲೆ ಕೊನೆಯ ಅರೆಗೋಳಾಕಾರದ ತಲೆಯ ನುಣ್ಣನೆ ಮೇತಲ ಹೆಗಲದಲದ ಕುಳಿಯಿಂದ ತಗ್ಗಿನೊಂದಿಗೆ ಕೀಲುಗೂಡುವುದು. ತಲೆಯೂ ಕಾವೂ 

ಒಂದಾಗುವೆಡೆಯಲ್ಲಿರುವ ಎರಡು ಗುಬಟುಗಳಿಗೆ ಹೆಗಲದಲದ ತಗ್ಗುಗಳಿಂದ ಬರುವ ಸುತ್ತಿರುಗಿಸುವ ಸ್ನಾಯುಗಳು ತಗುಲಂಟಿರುವುವು.  ಈ ಗಂಟುಗಳ ನಡುವೆ ಇರುವ ತೋಡಿನಲ್ಲಿ (ಗ್ರೂವ್) ಇತ್ತಲೆಗದ (ಬೈಸೆಪ್ಸ್‌) ಉದ್ದನೆಯ ಕಂಡರ (ಟೆಂಡನ್) ಆಡುವುದು.  

ತೋಳ್ಮೂಳೆಯ ಕಾವಿನ ಮೇಲ್ಗಡೆ ಅಡ್ಡ ಕೊಯ್ತದಲ್ಲಿ ಮೂರು ಪಕ್ಕೆಗಳಿರುವಂತೆ ಕಂಡರೂ ಕೆಳಗಡೆ ಚಪ್ಪಟೆಯಾಗಿ ಹಿಗ್ಗಿದಂತಿರುವುದು. ಕಾವಿನ ಹಿಂದುಗಡೆ ಸುತ್ತಸುತ್ತುವ ಆಳವಿಲ್ಲದ ಒಂದು ತೋಡಿನಲ್ಲಿ ಆರೆಲುವಿನ (ರೇಡಿಯಲ್) ನರ ಸಾಗುತ್ತದೆ. ಕೆಳಕೊನೆಯ 

ಹೊರಪಕ್ಕದ ಕೀಲುಗೂಡುವ ಜಾಗವಾದ ಎಲುದಲಿ (ಕ್ಯಾಪಿಟುಲಂ) ಆರೆಲುವಿನ ತಲೆಯೊಂದಿಗೂ ಒಳಪಕ್ಕದ ಎಲುಕಪ್ಪಿ (ಟ್ರೊಕ್ಲಿಯ) ಮೊಣೆಲುಬೊಂದಿಗೂ ಕೀಲುಗೂಡುತ್ತವೆ,  ಕೆಳ ಕೊನೆಯ ಕೀಲುಗೂಡದ ಭಾಗಗಳಲ್ಲಿ ಎರಡು ಬದಿಗಳಲ್ಲೂ ಒಂದೊಂದು 

ಮೇಲೆಲುಗೆಣ್ಣುಗಳಿವೆ (ಎಪಿಕಾಂಡೈಲ್ಸ್‌). ಇವುಗಳ ಮೇಲುಗಡೆ ಎಲುಗೆಣ್ಣು ಮೇಲಣ ಏಣುಗಳಿವೆ (ಸುಪ್ರಕಾಂಡೈಲಾರ್ ರಿಡ್ಜಸ್), ಮುಂದೋಳನ್ನು ಬೋರಲು ಹಾಕುವ ಅದನ್ನೂ ಬೆರಳುಗಳನ್ನೂ ಮಡಿಸುವ ಸ್ನಾಯುಗಳು ಒಳಪಕ್ಕದ ಮೇಲೆಲುಗೆಣ್ಣು, ಏಣುಗಳಿಗೆ 

ತಗುಲಂಟಿರುವುವು. ಹಾಗೇ ಮುಂದೋಳನ್ನು ಅಂಗತ್ತನಾಗಿಸುವ ಮಣಿಕಟ್ಟು, ಬೆರಳುಗಳನ್ನು ಹಿಂಬಾಗಿಸುವ ಸ್ನಾಯುಗಳು ಆಚೆಪಕ್ಕದ ಮೇಲೆಲುಗೆಣ್ಣು, ಏಣುಗಳಿಗೆ ಅಂಟಿಕೊಂಡಿರುತ್ತದೆ.
ಆರೆಲು: ಮುಂದೋಳಿನ ಹೊರಪಕ್ಕದಲ್ಲಿರುವ ನೀಳಮೂಳೆ, ಇದರ ಮೇಲ್ಕೊನೆಯಾದ ತಲೆ, ಬಟ್ಟಿನ ರೂಪದಲ್ಲಿದ್ದು ತೋಳ್ಮೂಳೆಯೊಂದಿಗೂ ಅದರ ಅಂಚು ಮೊಣೆಲುಬೊಂದಿಗೂ ಕೀಲುಗೂಡುವುದು. ತಲೆಯ ಕೆಳಗೆ ಕೊರಳಿದೆ. ಇದರ ಕೆಳಗಿರುವ ಗುಂಡುಬ್ಬಿಗೆ ಇತ್ತಲೆಗ 

ಸ್ನಾಯು ತಗುಲಂಟಿದೆ.  ಮಣಿಕಟ್ಟು, ಬೆರಳುಗಳನ್ನು ಆಡಿಸುವ ಸ್ನಾಯುಗಳು ಆರೆಲುವಿನ ಕಾವಿಗೆ ತಗುಲಂಟಿದೆ. ಮುಂದೋಳಿನ ಮುಂದಣ, ಹಿಂದಣ ರಚನೆಗಟ್ಟುಗಳನ್ನು ಬೇರ್ಪಡಿಸುವಂತಿರುವ ಎಲುನಡುವಣ (ಇಂಟರಾಸಿಯಸ್) ಪದರ, ಆರೆಲುವಿನ ಚೂಪಾದ ಒಳ 

ಅಂಚಿನುದ್ದಕ್ಕೂ ತಗುಲಿರುವುದು. ಇದರ ಎರಡು ತಲಗಳಲ್ಲೂ ಸ್ನಾಯುಗಳು ತಗುಲಂಟಿರುತ್ತವೆ. ಈ ಮೂಳೆಯ ಕೆಳಗಿನ ಕೊನೆ ಮೇಲಿನದಕ್ಕಿಂತಲೂ ಬಲು ದಪ್ಪ. ಮೊನೆಯಾದ ಚಾಚು ಹೊರಂಚಿಂದ ಕೆಳಕ್ಕೆ ಚಾಚಿರುವುದು. ಇದರ ಒಳಪಕ್ಕ ನುಣುಪಾಗಿದ್ದು ಮೊಣೆಲುಬಿನ 

ಕೆಳಕೊನೆಯಾದ ತಲೆಯೊಂದಿಗೂ ಉಳಿದ ಕೆಳಪಕ್ಕ ಮಣಿಕಟ್ಟಿನ ಎರಡು ಮುಂಗೈಯೆಲುಬು ಗಳೊಂದಿಗೂ ಕೀಲುಗೂಡುವುವು.
ಮೊಣೆಲುಬು: ಮುಂದೋಳಿನ ಒಳಪಕ್ಕದಲ್ಲಿನ ನೀಳಮೂಳೆ, ಇದರ ಮೇಲಿನ ಕೊನೆಯ ಎರಡು ಬಲವಾದ ನುಣುಪಾದ ಚಾಚುಗಳ ನಡುವೆ ಎಲುಕಪ್ಪಿಯ ಕಚ್ಚು ಇದ್ದು, ತೋಳ್ಮೊಳೆಯೊಂದಿಗೆ ಕೀಲುಗೂಡುತ್ತದೆ.  ಇದರಲ್ಲಿ ಕೆಳಗಿನ ಕೊಕ್ಕಂದ (ಕೊರಕಾಯ್ಡ್‌) ಚಾಚು ಒರಟು.  

ಮುಂದೋಳನ್ನು ಬಲವಾಗಿ ತೋಳಿನ ಮೇಲೆ ಮಡಿಸುವ ತೋಳು ಸ್ನಾಯು ಇಲ್ಲಿ ತಗುಲಂಟಿದೆ. ಮುಂದೋಳನ್ನು ಜೋರಾಗಿ ನೀಟುವ ಸ್ನಾಯುವಾದ ಮೂದಲೆಗ (ಟ್ರೈಸೆಪ್ಸ್‌) ಹಿಂದುಗಡೆ ತುದಿ ಮೇಲಿರುವ ಮೊಣಕೊನೆ (ಓಲಿಕ್ರೇನನ್) ಚಾಚಿಗೆ ಹಿಂದಿನಿಂದ 

ತಗುಲಂಟಿರುವುದು.  ಮಣಿಕಟ್ಟು, ಬೆರಳುಗಳನ್ನು ಆಡಿಸುವ ಮುಂದೋಳನ್ನು ಬೋರಲಾಗೂ ಅಂಗತ್ತನಾಗೂ ಹಾಕಿಸುವ ಸ್ನಾಯುಗಳು ತಗುಲಿಕೊಳ್ಳಲು, ಮೊಣೆಲುಬಿನ ಕಾವಿನಲ್ಲಿ 3 ಪಕ್ಕಗಳಿವೆ. ಮೊನಚಾದ ಆಚೆಪಕ್ಕದ ಅಂಚಿನುದ್ದಕ್ಕೂ ಎಲುನಡುವಣ ಪದರ 

ಅಂಟಿರುತ್ತದೆ.  ಮೇಲಿನ ಕೊನೆಗಿಂತ, ಕೆಳಗಿನದು ತೀರ ಸಣ್ಣದು. ಇದಕ್ಕೂ ಒಂದು ಕಂಬದಂಡ (ಸ್ಟೆಲಾಯ್ಡ್‌) ಚಾಚು ಇದೆ.  ಇದರ ಹೊರಪಕ್ಕ ಆರೆಲುವಿನೊಂದಿಗೆ ಕೀಲುಗೂಡುತ್ತದೆ. ಇದರ ಕೆಳಪಕ್ಕ ತಂತು ಮೆಲ್ಲಲುಬಿಗೆ ತಾಕಿರುವುದು. ಮೊಣಕೈ ಕೀಲಿನಲ್ಲಿ ಆರೆಲುವಿಗಿಂತ 

ಮೊಣೆಲುಬಿನ ಪಾತ್ರವೇ ದೊಡ್ಡದು. ಹಾಗೇ ಮಣಿಕಟ್ಟಿನೊಂದಿಗೆ ಕೀಲುಗೂಡುವಾಗ ಆರೆಲುವಿನ ಪಾತ್ರ ಹಿರಿಯದು. ಮಣಿಕಟ್ಟನ್ನು ತಿರುವಿದಾಗ, ಸುಮ್ಮನಿರುವ ಮೊಣೆಲುಬಿನ ಸುತ್ತಲೂ ಆರೆಲು ಸುತ್ತುವುದು.  ಅಂಗೈ ಮುಂದಕ್ಕೆ ತೋರುತ್ತಿರುವಾಗ ಆರೆಲು, ಮೊಣೆಲುಬು 

ಎರಡೂ ಸಮದೂರದಲ್ಲಿರುವುವು. ಅಂಗೈ ತಿರುವಿಹಾಕಿದರೆ ಮೊಣೆಲುಬಿನ ಮೇಲೆ ಆರೆಲು ಕೋಸೆಯಾಗಿ ಬೀಳುವುದು.
ಕೈ: ಮಣಿಕಟ್ಟು, ಅಂಗೈ, ಬೆರಳುಗಳು ಇದರಲ್ಲಿವೆ. ಮಣಿಕಟ್ಟಿನ 8 ಸಣ್ಣ ಮುಂಗೈ ಎಲುಬುಗಳು 2 ಸಾಲುಗಳಲ್ಲಿವೆ. 5 ಅಂಗೈ ಎಲುಬುಗಳೂ ಪುಟಾಣಿ ನೀಳ ಮೂಳೆಗಳೇ.  ಹೆಬ್ಬೆರಳಿನದೇ ಬಲು ಸಣ್ಣದು. ಉಳಿದವನ್ನು ಬಿಟ್ಟು ಪಕ್ಕಕ್ಕೆ ಬಾಗಿರುವುದು. ಅಂಗೈ ಎಲುಬುಗಳು 

ಮಣಿಕಟ್ಟಿನ ಕೆಳ ಸಾಲಿನ 4 ಮುಂಗೈ ಎಲುಬೊಂದಿಗೂ ಬೆರಳಿನ ಹತ್ತಿರದ ಎಲುವೆರಳೊಂದಿಗೂ (ಫೆಲ್ಯಾಂಕ್ಸ್‌) ಕೀಲು ಗೂಡುತ್ತದೆ.  ಹೆಬ್ಬೆರಳಲ್ಲಿ 2 ಎಲುವೆರಳುಗಳೂ ಉಳಿದ ತೋರು, ನಡು, ಉಂಗುರ, ಕಿರು ಬೆರಳುಗಳಲ್ಲಿ ಮೂರು ಮೂರೂ ಇವೆ. ಒಂದೊಂದು 

ಎಲುವೆರಳೂ ಪುಟ್ಟ ನಿಳ ಮೂಳೆ. ಮಣಿಕಟ್ಟಿನಲ್ಲಿರುವ ಮುಂಗೈ ಎಲುಬುಗಳು ಒಂದ ರೊಡನೊಂದು ಬಲವಾಗಿ ಬಿಗಿದಂತಿದ್ದರೂ ಒಂದಿಷ್ಟು ಚಲನೆ ಆಗುವಂತಿದೆ. ಮಣಿಕಟ್ಟಿನ ಅಂಗೈಪಕ್ಕ, ಹಳ್ಳವಾಗಿ ಒಂದು ಬಲವಾದ ತಂತುಗಟ್ಟು ಮೇಲೇ ಹಾದು ಇದನ್ನು 

ಸುರಂಗವಾಗಿಸಿದೆ. ಬೆರಳುಗಳಿಗೆ ಹೋಗುವ ರಕ್ತನಾಳಗಳು, ನರಗಳು, ಕಂಡರಗಳೂ ಈ ಸುರಂಗದಲ್ಲಿ ಸಾಗುವುವು-ಹೆಬ್ಬೆರಳಿನ ಹಲತೆರನ ಚಲನೆಗಳು ಮಾನವನ ಬಲು ಹೆಚ್ಚಿನ ಗುಣ.
ಕೆಳಗಿನ ಅವಯವ: ಇದರಲ್ಲಿ ಕೊಂಡಿಮೂಳೆ, ತೊಡೆಲುಬು ಮಂಡಿಚಿಪ್ಪು, ಕಣಕಾಲೆ (ಟಿಬಿಯ), ಸೂಜಿಲುಕ (ಫೆಬುಲ), ಪಾದದ ಹಲವು ಮೂಳೆಗಳೂ ಇವೆ. 
ಕಿಳ್ಗುಳಿಯ ಪಕ್ಕ, ಮುಂಗೋಡೆಗಳಾಗುವ ದೊಡ್ಡ ಡೊಂಕು ಮೂಳೆ ರೋಂಡಿಮೂಳೆ. ಎಳೆತನದಲ್ಲಿ ಬೇರೆ ಬೇರೆಯಾಗಿರುವ ಟೊಂಕೆಲುಬು (ಐಲಯಂ), ಕುಂಡೆಲುಬು (ಇಸ್ಕಿಯಂ), ಗುಂಜೆಲುಬುಗಳು (ಪ್ಯುಬಿಸ್) 18-20 ವರ್ಷಗಳ ವಯಸ್ಸಿಗೆ ಒಂದು ಗೂಡುತ್ತವೆ.  ಇವು 

ಮೂರೂ ಕೂಡುವೆಡೆ, ತೊಡೆಲುಬಿನ ಇಡೀ ಗುಂಡುತಲೆ ಕೂಡುವಂತೆ ಒರಳಂತಿರುವ, ಎಲುಗುಂದಣ (ಅಸಿಟ್ಯಾಬುಲಂ) ಇದೆ.  ಎಲುಗುಂದಣದ ಮೇಲ್ಗಡೆ ಹೊರಚಾಚಿಕೊಂಡಿರುವುದು ಟೊಂಕೆಲುಬು, ಕೆಳಗಿರುವುದು ಕುಂಡೆಲುಬು, ಮುಂದಕ್ಕೆ ಒಳ ಚಾಚಿರುವುದು 

ಗುಂಜೆಲುಬು. ಈ ಮೂರು ಮೂಳೆಗಳ ನಡುವೆ ಕಂಡಿತಡೆಕ (ಅಬ್ಚುರೇಟರ್) ತೂರುಗಂಡಿ (ಫೋರಮನ್) ಇದೆ.
ಕಿಳ್ಗುಳಿ: ರೊಂಡಿಮೂಳೆಗಳು ಮುಂದುಗಡೆ ಕೂಡೇಣಲ್ಲೂ (ಸಿಂಫೈಸಿಸ್) ಹಿಂದುಗಡೆ ಪಾವನಿ ಪಕ್ಕಗಳಲ್ಲೂ ಕೀಲುಗೂಡುವುದರಿಂದ ಕಿಬ್ಬೊಟ್ಟೆಯಲ್ಲಿರುವ ಎಲುಗಟ್ಟಾದ ಕೀಳ್ಗುಳಿಯ ನಡುಕಟ್ಟು ಆಗುವುದು. ಕಿಬ್ಬೊಟ್ಟೆ ಅಂದರೆ, ಈ ಎಲುಬುಗಳ ನಡುವಣ ಪೊಳ್ಳೇ ಹೊರತು 

ಅದರ ಸುತ್ತಣ ಮೂಳೆಯಲ್ಲ. ಕಿಳ್ಗುಳಿಯಲ್ಲಿ ಹಿರಿಯ ಹುಸಿ ಭಾಗ, ಕಿರಿಯ ದಿಟ ಭಾಗಗಳಿವೆ. ದಿಟ ಕಿಳ್ಗುಳಿಗೆ ಮೇಲಣ ಕಂಡಿ, ಪೊಳ್ಳು, ಕೆಳಗಣ ಕಂಡಿಗಳಿವೆ. ಹೆರಿಗೆ ಮುಂಚೆ ಪಿಂಡಗೂಸಿನ (ಫೀಟಸ್) ತಲೆ ಕೆಳಗಿಳಿವುದು ದಿಟ ಕಿಳ್ಗುಳಿಯೊಳಕ್ಕೇ.  ದಿಟ ಕಿಳ್ಗುಳಿಯ ಮೇಲಿರುವ 

ಹುಸಿ ಕಿಳ್ಗುಳಿ ಅಗಲವಾಗಿದ್ದು ಟೊಂಕೆಲುವಿನ ತಗ್ಗುಗಳು ಎರಡು ಪಕ್ಕಗಳಲ್ಲಿವೆ. ನೆಟ್ಟಗೆ ನಿಂತುಕೊಂಡಿರುವಾಗ, ಕಿಳ್ಗುಳಿ ಸಹಜವಾಗಿ ಮುಂದಕ್ಕೆ ಇಳಿಜಾರಾಗುವಂತೆ ಬಾಗಿರುವುದರಿಂದ, ಪಾವನಿಯ ಮೇಲಿನ ಅಂಚು ಗುಂಜೆಲುವಿನ ಕೂಡೇಣಿಗೂ ಎತ್ತರದಲ್ಲಿರುತ್ತದೆ.
ಹೆಣ್ಣಿನ ಕಿಳ್ಗುಳಿಗೂ ಗಂಡಿನದಕ್ಕೂ ಹಲವು ವ್ಯತ್ಯಾಸಗಳಿವೆ. ಹೆಣ್ಣಿನಲ್ಲಿ ಮೂಳೆಗಳು ನುಣುಪಾಗಿ ಕೋಮಲವಾಗಿದ್ದು, ಸ್ನಾಯುಗಳು ತಗುಲಿಕೊಳ್ಳುವ ಏಣುಗಳು, ಚಾಚುಗಳು ಅಷ್ಟಾಗಿ ಎದ್ದುಕಾಣುವುದಿಲ್ಲ. ಆಳ ಕಡಿಮೆ, ದಿಟ ಕಿಳ್ಗುಳಿಯ ಒಳಗಂಡಿ ಇನ್ನೂ ಗುಂಡಗೂ 

ಗುಂಜೆಲುಗಳಿಂದಾದ ಕೆಳಗಿನ ಕಮಾನು ಇನ್ನೂ ಅಗಲಕ್ಕೂ ಇರುವುವು. ಕುಂಡೆಲುಬುಗಳ ಗುಂಡುಬ್ಬುಗಳು, ಹೆರಿಗೆಯಲ್ಲಿ ಪಿಂಡಗೂಸು ಹೊರಬೀಳಲು ಅಡ್ಡಿಯಾಗದಂತೆ ಇನ್ನೂ ದೂರದೂರ ಇವೆ. ಎಲುಗುಂದಣವೂ ಚಿಕ್ಕದು. ಒಟ್ಟಿನಲ್ಲಿ ಇಡೀ ಕಿಳ್ಗುಳಿಯ ಅಡ್ಡಗಲ 

ಹೆಚ್ಚಿರುವುದರಿಂದಲೇ ಹೆಣ್ಣಿನ ಪಿರ್ರೆಗಳು ದೊಡ್ಡವು. ಕಿಳ್ಗುಳಿಯ ಒಳಗಿನ ಅಳವು ಹೆಚ್ಚಿರುವುದರಿಂದ, ಬಸುರಿನಲ್ಲಿ ಗರ್ಭಕೋಶ ದೊಡ್ಡದಾಗಿ ಬೆಳೆಯಲು ಅನುಕೂಲಕರ.
ಟೊಂಕೆಲುಬಿನ ಕೆಳಗಿನ ಸಣ್ಣ ಭಾಗ ಎಲುಗುಂದಣದಲ್ಲಿ ಸೇರಿದೆ. ಅಗಲದ ತಟ್ಟೆಯಂತಿರುವ ಮೇಲಿನ ಭಾಗದ ಹೊರ ಅಂಚು ಉಬ್ಬೇಣು (ಕ್ರಸ್ಟ್‌) ಎನಿಸಿಕೊಳ್ಳುತ್ತದೆ. ಕಿಬ್ಬದಿ ಕೆಳಗಡೆ ಇದನ್ನು ಮೈಮೇಲೆ ಮುಟ್ಟಲು ಸಿಗುವುದು. ಹೊಟ್ಟೆಗೋಡೆಯ ಅಗಲವಾದ ಸ್ನಾಯುಗಳು 

ನೆಲೆಯೂರುವುದು ಇಲ್ಲೇ. ಟೊಂಕೆಲುಬಿನ ಹೊರ ಪಕ್ಕದಲ್ಲಿ ಕುಂಡಿಯ ಸ್ನಾಯುಗಳು ಕೂಡಂಟಿವೆ. ಒಳಪಕ್ಕದ ಮುಂಭಾಗ ತಗ್ಗಾಗಿದ್ದು, ತೊಡೆಯನ್ನು ಮಡಿಸುವ ಟೊಂಕೆಲುಬು ಸ್ನಾಯು ಕೂಡಂಟಿರುವುದು. ಹಿಂದುಗೆಡೆ ಐ ಆಕಾರದ ಒರಟು ಭಾಗ ಪಾವನಿಯೊಂದಿಗೆ 

ಗಟ್ಟಿಯಾಗಿ ಕೀಲುಗೂಡುವುದು. ಗುಂಜೆಲುವಿನಲ್ಲಿ ನಡುವೆ ಕಾಯವೂ ಎರಡು ಕವಲುಗಾಲೂ (ರೇಮೈ) ಇರುವುದರಿಂದ ಟಿ ಆಕಾರದಲ್ಲಿದೆ. ಎರಡು ಪಕ್ಕಗಳ ಗುಂಜೆಲುಗಳೂ ಕೂಡೇಣಿನಲ್ಲಿ ಕೂಡುವೆಡೆ ಇದರ ಕಾಯ ಚಪ್ಪಟೆಯಾಗಿರುತ್ತದೆ. ಮೇಲಿನ ಕವಲುಗಾಲು ಹಿಂದಕ್ಕೆ 

ಹೋಗಿ ಟೊಂಕೆಲುವನ್ನೂ ಕೆಳಗಿನದು ಕುಂಡೆಲುಬಿನೊಂದಿಗೂ ಸೇರಿಕೊಳ್ಳುತ್ತವೆ. ಹೆಚ್ಚು ಕಡಿಮೆ U ಆಕಾರದಲ್ಲಿರುವ ಕುಂಡೆಲುಬಿನ ಮೇಲಿನ ಕೊನೆ ಎಲುಗುಂದಣದಲ್ಲಿ ಕೂಡುವುದು. ಕೆಳ ಭಾಗ ಗುಂಜೆಲುವೊಂದಿಗೆ ಕೂಡಿ ಕಂಡಿತಡೆಕತೂರುಗಂಡಿಯ (ಅಬ್ಚುರೇಟರ್ 

ಪೋರಮನ್) ಕೆಳ ಅಂಚಾಗುವುದು. ಇದರ ಎರಡು ಕವಲುಗಾಲುಗಳಿಗೂ ತೊಡೆಯನ್ನು ನಡುಗಡೆಗೆಳೆವ ಸ್ನಾಯು ಅಂಟಿರುತ್ತದೆ. ಮೇಲಿನ ಹಿಂದಣ ಭಾಗ ದಪ್ಪನಾಗಿದ್ದು ಹಿಂತೊಡೆಯ (ಹ್ಯಾಮ್ಸ್ಟ್ರಿಂಗ್) ಬಲವಾದ ಸ್ನಾಯುಗಳು ಕೂಡಂಟಿರುವುವು. ಕುಂಡೆಲುಬಿನ ಮುಳ್ಳು 

ಚಾಚುರೊಂಡಿಯ ಹಿರಿಯ ಕಚ್ಚನ್ನೂ (ಗ್ರೇಟ್ ಸಯೆಟಿಕ್ ನಾಚ್) ಕಿರಿಯ ಕಚ್ಚನ್ನೂ ಬೇರ್ಪಡಿಸುವುದು. ನೆಲದ ಮೇಲೆ ಕುಳಿತಾಗ ಕುಂಡೆಲುಬಿನ ಹಿಂದುಗಡೆಯಿರುವ ಗುಂಡುಬ್ಬು (ಟ್ಯೂಬರಾಸಿಟಿ) ನೆಲಕ್ಕೂರುವುದು.
ತೊಡೆಲುಬು: ಇದರಷ್ಟು ಉದ್ದದ ಮೂಳೆ ಮೈಯಲ್ಲಿ ಇನ್ನೊಂದಿಲ್ಲ. ಇದರ ಮೇಲಿನ ಕೊನೆಯ ಆರೆಗೋಳಾರದ ನುಣುಪಾದ ತಲೆ ಎಲುಗುಂದಣದ ಗುಳಿಯೊಂದಿಗೆ ಕೀಲುಗೂಡುತ್ತದೆ. ತಲೆಗೂ ಕಾವಿಗೂ ನಡುವೆ ಕೆಳಕ್ಕೂ ಹೊರಕ್ಕೂ ಚಾಚಿರುವ ಕೊರಳಿದೆ. ಕೊರಳಿಗೂ 

ಕಾವಿಗೂ ನಡುವೆ ಚಾಚುಗಳಾಗಿರುವ ಎರಡು ತಿರುಗಾಲಿಗಳಿವೆ (ಟ್ರೊಕ್ಯಾಂಟರ್ಸ್). ಆಚೆ ಪಕ್ಕದ ಹಿರಿಯ ತಿರುಗಾಲಿಗೆ ತೊಡೆಯನ್ನು ತಿರುಗಿಸುವ ಸ್ನಾಯುಗಳೂ ಒಳಬದಿಯ ಕಿರಿಯದಕ್ಕೆ ತೊಡೆಯನ್ನು ಮಡಿಸುವ ಸ್ನಾಯುವೂ ತಗುಲಂಟಿವೆ. ಬೆಳೆದವರಲ್ಲಿ ತೊಡೆಲುಬಿನ. 

ಕೊರಳು ಸಮತಲಕ್ಕೆ ಸುಮಾರು 350 ಕೋನದಲ್ಲಿ ಬಾಗಿರುವುದು. ಕಾವಿನ ನಡುಭಾಗ ಕಬ್ಬಿನ ಜಲ್ಲೆಯಂತೆ ದುಂಡಗಿದ್ದು ಮೇಲೂ ಕೆಳಗೂ ದಪ್ಪಗಿರುತ್ತದೆ. ಇದರ ಮುಂದೂ ಪಕ್ಕಗಳಲ್ಲೂ ತೊಡೆಯನ್ನು ಚಾಚುವ ಸ್ನಾಯುಗಳು ತಗುಲಿಕೊಂಡಿವೆ. ಹಿಂದುಗಡೆ 

ಮೂಳೆಯುದ್ದಕ್ಕೂ ಇರುವ ನೀಳ ಏಣು ದರಕುವಳಿಗೆ (ಲೀನಿಯ ಆಸ್ಪರ) ತೊಡೆಯ ಒಳಸರಿಕ ಸ್ನಾಯುಗಳು ತಗುಲಂಟಿವೆ. ಕಣಕಾಲೆ ಮೂಳೆಯ ಮೇಲಿನ ತಲದೊಂದಿಗೆ ಕೀಲುಗೂಡಿ ಮಂಡಿಯಲ್ಲಿ ಮಡಿಸುವಂತೆ ತೊಡೆಲುಬಿನ ಕೆಳಕೊನೆಯಲ್ಲಿ ಅಗಲವಾದ ನುಣುಪಾದ 

ಕೀಲುಗೂಡುವ ತಲವಿರುವುದು. ಇದರ ಮುಂದಿನ ತಗ್ಗಿನಲ್ಲಿ, ಮಂಡಿಚಿಪ್ಪು ಮೇಲಕ್ಕೂ ಕೆಳಕ್ಕೂ ಆಡುವಂತಿರುವುದು. ಕೆಳಗಿನ ಹಿಂದಿನ ಭಾಗಗಳ ನಡುವೆ ಇರುವ ಆಳದ ತಗ್ಗಿನಲ್ಲಿ ಮಂಡಿಕೀಲಿನ ಚಲನೆಯನ್ನು ಮಿತಿಯಲ್ಲಿ ಹಿಡಿದಿಡುವ ಶಿಲುಬಿಕ (ಕ್ರೂಸಿಯೇಟ್) 

ತಂತುಗಟ್ಟುಗಳಿವೆ. ತಗ್ಗಿನ ಪಕ್ಕಗಳಲ್ಲಿರುವ ಒಂದೊಂದು ಎಲುಗೆಣ್ಣೂ (ಕಾಂಡೈಲ್) ಕಣಕಾಲೆಯವೊಂದಿಗೆ ಕೀಲುಗೂಡುವುದು.
ಮಂಡಿಚಿಪ್ಪು: ಕಾಲನ್ನು ನೇರವಾಗಿ ನೀಡುವ ದೊಡ್ಡ ಸ್ನಾಯುಗಳ ಕಂಡರದಲ್ಲೇ ಬೆಳೆದಿರುವ ಸಾಸಿವಂದ (ಸೆಸೆಮಾಯ್ಡ್‌) ಮೂಳೆಯಾಗಿ. ಚಪ್ಪಟೆಯಾಗಿ ಮುಮ್ಮೂಲೆ ಆಕಾರದಲ್ಲಿದೆ. ಇದರ ಹಿಂಭಾಗ ನುಣುಪಾಗಿದ್ದು ತೊಡೆಲುಬಿನ ಕೆಳಕೊನೆಯ ಮುಂಭಾಗದೊಂದಿಗೆ 

ಕೀಲುಗೂಡುವುದು. ಬಲವಾದ ಕಂಡರದ ತಂತುಗಳು ಅಂಟಿರುವುದರಿಂದ ಮುಂಭಾಗವೂ ಪಕ್ಕಗಳೂ ಒರಟಾಗಿವೆ.
ಕಣಕಾಲೆ: ಕೆಳಕಾಲಿನ ಎರಡು ಮೂಳೆಗಳಲ್ಲಿ ಒಳ ಪಕ್ಕದಲ್ಲಿ ದಪ್ಪನಾದ ಕಣಕಾಲಿನ ಮೂಳೆಯದು. ನಿಂತಿರುವಾಗ ಇದು ತೊಡೆಲುಬಿನ ಮೂಲಕ ಬೀಳುವ ಮೈಭಾರವನ್ನು ಪಾದಕ್ಕೆ ಸಾಗಿಸುವುದು. ಮೇಲಿನ ಕೊನೆಯಾದ ಚಪ್ಪನೆಯ ತಲೆಯಲ್ಲಿ ಚಪ್ಪಟೆಯಾಗಿ ಅಗಲಕ್ಕಿರುವ 

ಎರಡು ಎಲುಗೆಣ್ಣುಗಳು. ತೊಡೆಲುಬಿನ ಎಲುಗೆಣ್ಣುಗಳೊಂದಿಗೆ ಕೀಲುಗೂಡುತ್ತವೆ. ಹೊರ ಪಕ್ಕದ್ದರ ತಳದಲ್ಲಿ ಸೂಚಿಲುಕದ ತಲೆಯೊಂದಿಗೆ ಕೀಲು ಗೂಡಲು ಒಂದು ಸಣ್ಣ ಎಲುಮೊಗವಿದೆ. ಎಲುಗೆಣ್ಣುಗಳ ನಡುವೆ ತರಕಲಾಗಿ ಎದ್ದಿರುವ ಬುಗುಡಿಗೆ (ಎಮಿನೆನ್ಸ್‌) ಕೀಲೊಳಗಿನ 

ಶಿಲುಬಿಕ ತಂತುಗಟ್ಟುಗಳೂ ಮಂಡಿ ಕೀಲೊಳಗಿರುವ ಮಂಡಿಚಿಪ್ಪಿನ ಚಂದ್ರಬಟ್ಟಿನಂತೆ (ಮೆನಿಸ್ಕಸ್) ಇರುವ ಮೆಲ್ಲೆಲುಬುಗಳೂ ಬಲವಾಗಿ ತಗುಲಿಕೊಂಡಿವೆ. ಎಲುಗೆಣ್ಣುಗಳು ಚಪ್ಪಟೆ ಆಗಿರುವುದರಿಂದ ತೊಡೆಲುಬು ಜಾರದಂತೆ ಈ ಮೆಲ್ಲೆಲುಬುಗಳು ಸಿಂಬೆಗಳ 

ಹಾಗಿರುವುವು. ಕಣಕಾಲೆಯ ಕಾವಿಗೆ 3 ಪಕ್ಕಗಳಿವೆ. ಚರ್ಮದ ಕೆಳಗೆ ಕೈಗೆ ಸಿಗುವಂತಿರುವ ಇದರ ಒಳಪಕ್ಕವೆ ಕಣಕಾಲು. ಪಾದವನ್ನು ಆಡಿಸುವ ಸ್ನಾಯುಗಳು ಇದರ ಹಿಂದಣ, ಹೊರ ಪಕ್ಕಗಳಿಗೆ ಕೂಡಂಟಿವೆ. ಮುಂದಣ ಅಂಚು ಚೂಪಾದ ಏಣು. ಇದರ 

ಮೇಲ್ಕೊನೆಯಲ್ಲಿರುವ ಗುಬಟಿಗೆ ಬಲವಾಗಿ ನೀಟುವ ಕಾಲಿನ ಸ್ನಾಯುಗಳ ದಪ್ಪನೆಯ ಕಂಡರ ಕೂಡಂಟಿದೆ. ಹೊರ ಪಕ್ಕದ ಅಂಚಿಗೆ ಎಲುನಡುವಣ ಪದರ ಅಂಟಿದೆ. ಕಣಕಾಲೆಯ ಕೆಳಕೊನೆ ಮೇಲಿನದರಷ್ಟು ದಪ್ಪವಲ್ಲ. ಹರಡಿನ ಎಲುದಾಳದೊಂದಿಗೆ (ಟ್ಯಾಲಸ್) 

ಕೀಲುಗೂಡುವುದು. ಒಳ ಪಕ್ಕದ ಬಡಿಗುಬಟಾಗಿ (ಮ್ಯಾಲಿಯೋಲಿಸ್) ಮುಂದೆ ಸಾಗಿ ಹರಡಿನ ಒಳ ಪಕ್ಕದಲ್ಲಿ ಕೈಗೆ ಸಿಗುವ ಗೆಣ್ಣಾಗಿರುತ್ತದೆ.
ಸೂಚಿಲುಕ: ಕೆಳಕಾಲಿನ ಹೊರಪಕ್ಕದ ಸ್ನಾಯುಗಳ ಆಳದಲ್ಲಿ. ತೆಳುವಾಗಿ ನುಗ್ಗೆ ಕಡ್ಡಿಯಂತಿವೆ. ಮೇಲಿನ ಕೊನೆ ಕಣಕಾಲೆಯ ಹೊರ ಪಕ್ಕದ ಎಲುಗೆಣ್ಣೊಂದಿಗೆ ಕೀಲುಗೂಡುವುದು. ನಾಲ್ಕೂ ಪಕ್ಕಗಳಿರುವ ಕಾವಿಗೆ ಹಲವು ಸ್ನಾಯುಗಳು ತಗುಲಿ ಕೊಂಡಿರುತ್ತವೆ. ಒಳಪಕ್ಕದ 

ಏಣೊಂದಕ್ಕೆ ಎಲುನಡುವಣ ಪದರ ಅಂಟಿರುತ್ತದೆ. ಕೆಳ ಕೊನೆ ಮಾತ್ರ ಬಲವಾದ ಹೊರ ಪಕ್ಕದ ಬರಿಗುಬಟಾಗಿ ಹರಡಿನ ಆಚೆ ಪಕ್ಕದಲ್ಲಿ ಉಬ್ಬಿ ಕಾಣುವುದು. ಇದರ ಒಳಪಕ್ಕ ಎಲುದಾಳದೊಂದಿಗೆ ಕೀಲುಗೂಡುವುದು.
ಪಾದ: ಮುಂಗಾಲೆಲುಬುಗಳು (ಟಾರ್ಸಸ್), ಅಂಗಾಲೆಲುಬುಗಳು (ಮೆಟಾರ್ಸಲ್ಸ್‌), 5 ಬಿಡಿ ಬೆಟ್ಟುಗಳೂ ಇಲ್ಲವೇ ಕಾಲೆಲುಬೆರಳುಗಳೂ ಇದರಲ್ಲಿವೆ. ಕಾಲಿನ ಹೆಬ್ಬೆಟ್ಟು ಕೈಯ ಹೆಬ್ಬೆರಳನ್ನು ಹೋಲುವುದಾದರೂ ಚಲನೆಗೆ ಮಿತಿಯಿದೆ. ಹರಡಿನ 7 ಮುಂಗಾಲೆಲುಬುಗಳು 3 

ಸಾಲುಗಳಲ್ಲಿವೆ. ಮೇಲಿನ ಸಾಲಿನಲ್ಲಿ ಎಲುದಾಳ (ಟ್ಯಾಲಸ್), ಎಲುಮಡಗಳೂ (ಕ್ಯಾಲ್ಕೇನಿಯಸ್), ನಡು ಸಾಲಿನಲ್ಲಿ ಕಿರಿಯೋಡವೂ (ನೆವಿಕ್ಯುಲಾರ್), ಮೂರನೆಯ ಸಾಲಿನಲ್ಲಿ ಮೇಕುರೂಪಿ (ಕ್ಯೂನಿಫಾರಂ) ಮೂಳೆಗಳು, ಘನಾಕಾರಿ (ಕ್ಯುಬಾಯ್ಡ್‌) ಮೂಳೆಯೂ ಇವೆ. 

ಮುಂಗಾಲೆಲುಬುಗಳು ಸಣ್ಣ ಘನಾಕಾರದವು. ಅಂಗಾಲಿನ, ಮೇಲಿನ ಪಕ್ಕಗಳಿಗೆ ತಂತುಗಟ್ಟುಗಳು ತಗುಲಂಟುವುದರಿಂದ ಒರಟಾಗಿರುತ್ತವೆ. ಆದರೆ ಎಲುದಾಳ ಮಾತ್ರ ಕೆಳಕಾಲಿನ ಎರಡು ಮೂಳೆಗಳು, ಎಲುಮಡದ ನಡುವೆ ನುಣುಪಾಗಿ ಕೀಲುಗೊಡುವುದು. 

ಹೊರಗಾಣುವ ಹಿಮ್ಮಡಿಯ ಉಬ್ಬಿನಲ್ಲಿ ಮುಖ್ಯವಾಗಿ ಎಲುಮಡದ ಹಿಂಚಾಚಿರುವುದು. ಇದರ ಹೊರತಾಗಿ ಮುಂಗಾಲೆಲುಬುಗಳೂ ಹಿಂದೂ ಮುಂದೂ ಕೀಲುಗೂಡುವಂತೆ ನುಣುಪಾಗಿರುವುವು. ಅಂಗಾಲೆಲುಬುಗಳೂ ಎಲುವೆರಳುಗಳೂ ಕೈಯಲ್ಲಿ ಇರುವ ಹಾಗೇ ಇರುತ್ತವೆ.
ಸಾಸಿವಂದ ಮೂಳೆಗಳು: ಮೇಲಿನವೇ ಅಲ್ಲದೆ, ಕೈಯಲ್ಲೂ ಪಾದದಲ್ಲೂ ಸ್ನಾಯುಗಳ ಕಂಡರಗಳ ನಡುವೆ ಸಾಸಿವಂದ ಮೂಳೆಗಳೆಂಬ ಕೆಲವು ಮಿಗಿಲಾದ ಮೂಳೆಗಳು ಬೆಳೆದಿರುತ್ತವೆ. ಮಂಡಿಚಿಪ್ಪು ಈ ತೆರನ ಮೂಳೆಯ ಒಳ್ಳೆಯ ಉದಾಹರಣೆ.
ಪಿಂಡದಲ್ಲಿ ವಿಕಾಸ: ಎಲುಗಟ್ಟನ ವಿಕಾಸಕ್ಕೆ ಪಿಂಡದ ನಡುವಿನ ಚರ್ಮವೇ (ಮೀಸೊಡೆರ್ಮ್) ಮೂಲ. ಹೊರನನೆಚರ್ಮ(ಎಕ್ಟೊಡರ್ಮ್) ಒಳನನೆ ಚರ್ಮಗಳ (ಎಂಡೊಡರ್ಮ್) ಇಪ್ಪದರದ ಬಟ್ಟಿನಂತಿರುವ 15 ದಿನಗಳ ಪಿಂಡದ ಹಿಂಭಾಗದಲ್ಲಿ ಹೊರನನೆ ಚರ್ಮದ 

ಜೀವಕಣಗಳು ಗುಣಿತವಾಗಿ ಉದ್ದನೆಯ ಗಂಟು ಕಾಣಿಸಿ ಕೊಳ್ಳುತ್ತದೆ. ಮುಂದೆ ಇದೇ ಬೆಂಬೀವಿಗೂ (ನೋಟೊಕಾರ್ಡ್) ನಡುನನೆ ಚರ್ಮಕ್ಕೂ ಮೂಲವಾಗುವ ಆದಿಯ ಪಟ್ಟೆ (ಪ್ರಿಮಿಟಿವ್ ಸ್ಟ್ರೀಕ್). ಕೆಳಮಟ್ಟದ ಕಶೇರುಕಗಳ ಪಿಂಡಗಳಲ್ಲಿನ ನೆನೆಕಣಕಂಡಿಗೆ (ಬ್ಲಾಸ್ಟೊಪೋರ್) 

ಇದು ಸಮಾನಾಂಗ. ಈ ಪಟ್ಟಿಯ ಮುಂದಿನ ಕೊನೆಯಲ್ಲಿನ (ಹೆನ್ಸನ್ನನ) ಗಂಟಿನಿಂದ ಉರುಳೆಯಾಕಾರದ ಜೀವಕಣ ರಾಸಿಯೇ ಬೆಂಬೀವು ಆದಾಗ ತಲೆ ಯಾವುದೆಂದು ನಿರ್ಧರವಾಯಿತೆನ್ನಬಹುದು. ವಿಕಾಸವಾಗುತ್ತಿರುವ ಕೇಂದ್ರದ ನರದ ಮಂಡಲದ ತಳದಲ್ಲಿ ಈ 

ಬೆಂಬೀವು ಇದ್ದುಕೊಂಡು ಬೆಳೆಯುತ್ತಿರುವ ಪಿಂಡಕ್ಕೆ ಊರೆ ಕೊಡುವುದು.
ಚೊರಮೀನಿನ (ಷಾರ್ಕ್) ತೆರನ ಮೀನುಗಳಲ್ಲಿ ಬೆಂಬೀವಿನ ಸುತ್ತಲೂ ಮೆಲ್ಲೆಲುಬಿನ ಬೆನ್ನೆಲುಬುಗಳು ಬೆಳೆದು ಅದನ್ನು ಒಂದಿಷ್ಟು ಇರುಕಿಸುತ್ತವೆ ಎನ್ನಬಹುದು. ಇಷ್ಟಾದರೂ ಬೆನ್ನೆಲುಬುಗಳೊಳಗೆ ಇಡೀ ಬೆಂಬೀವು ಉಳಿದೇ ಇರುತ್ತದೆ. ಆದರೆ ಮೇಲ್ತರದ ಕಶೇರುಕಗಳಲ್ಲಿ 

ಬೆಂಬೀವು ತತ್ಕಾಲದ ರಚನೆಯಾಗಿದ್ದು, ಆಮೇಲೆ ಬೆನ್ನೆಲುಬುಗಳ ಕಾಯಗಳಲ್ಲೂ ಬೆನ್ನೆಲುನಡುವಣ ಬಟ್ಟುಗಳ ಪುಷ್ಪಸಗಳಲ್ಲೂ ಪುಟಾಣಿ ತೂತಾಗಿ ಉಳಿದಿರಬಹುದು.
ಬೆಂಬೀವು ವಿಕಾಸವಾಗುತ್ತಿರುವಾಗ ಆದಿಯ ಪಟ್ಟಿಯ ಪಕ್ಕಗಳಿಂದ ಜೀವಕಣಗಳು ವೆಗ್ಗಳಿಸಿ ನಡುನನೆ ಚರ್ಮದ ಪದರವಾಗಿ, ಕೊನೆಗೆ ಹೊರನನೆ ಚರ್ಮ, ಒಳನನೆ ಚರ್ಮಗಳ ನಡುವೆ ಸೇರಿಕೊಳ್ಳುತ್ತವೆ. ನಡುವಿನ ಚರ್ಮದ ಪದರ ಬರುಬರುತ್ತ ಮೂರು ರಾಸಿಗಳಾಗಿ 

ವಿಂಗಡವಾಗುತ್ತವೆ. ನಡುನನೆ ಚರ್ಮದ ಪಿಂಡಖಂಡಗಳು (ಸೋಮೈಟ್ಸ್‌),  ಮೈಗೋಡೆ ಮತ್ತು ಕರುಳುಗಳು, ಮೂತ್ರ ಮಂಡಲಗಳು ಇವುಗಳಿಂದ ಏಳುವುವು.
ಕಶೇರುಕಗಳಲ್ಲಿ, ಬೆಂಬೀವಿಂದ ನಡುನನೆಚರ್ಮದ ವಿಕಾಸ ಹೆಚ್ಚಳಿಕೆಯ ವಿಚಾರ, ತಲೆಬುರುಡೆ, ಬೆನ್ನೆಲುಬೂ ಅವೊಂದಿಗಿನ ಬೇರೆ ರಚಗಟ್ಟುಗಳೂ ಪಿಂಡಖಂಡದ ಒಂದು ಭಾಗದಿಂದಲೂ ಕೈ ಕಾಲುಗಳ ಎಲುಗಟ್ಟು ಪಕ್ಕದ ಪದರದಿಂದಲೂ ಏಳುತ್ತವೆ. ಒಂದೊಂದು 

ಪಿಂಡಖಂಡವೂ ಮೂರು ಪದರಗಳಲ್ಲಿ ವಿಕಾಸವಾಗುವುದು. ಮೇಲ್ಮೇಲಿರುವ ಮುಂದೆ ಚರ್ಮವಾಗುವ ಚರ್ಮಪಡಿ (ಡರ್ಮಟೋಂ) ಮೊದಲಿನದು. ಹೊರಪಕ್ಕದ ಆಳದಲ್ಲಿರುವ ತುಂಡಾದ, ಮುಂದೆ ಸ್ನಾಯುಗಳಾಗುವ ಸ್ನಾಯುಪಡಿ (ಮಯೋಟೋಂ) ಎರಡನೆಯದು. 

ಒಡಲೆಡೆಯ ತುಂಡಾದ ಗಡುಸುಪಡಿ (ಸ್ಕ್ಲೀರೊಟೋಂ) ಮೂರನೆಯದು. ಪಿಂಡಖಂಡದ ಒಂದೊಂದು ಜೊತೆಯಿಂದಲೂ ಗಡುಸುಪಡಿಯ ಜೀವಕಣಗಳು ಒಳಸರಿದು ನಡುಗೆg ೆಯಲ್ಲಿ ಒಂದುಗೂಡಿ ಬೆಂಬೀವಿನ ಸುತ್ತ ಸುತ್ತಿಕೊಂಡು ಬೆನ್ನುಕಡೆ ನರದ ನಾಳಿಯಿಂದ 

(ನ್ಯೂರಲ್ ಟ್ಯೂಬ್). ಒಡಲ ಕಡೆ ಮಹಾಧಮನಿಯಿಂದ (ಅಯೋರ್ಟ) ಬೇರ್ಪಡಿಸುತ್ತವೆ. ಗಡುಸುಪಡಿಯ ಊತಕ ಮೊದಲಿನಂತೆ ತುಂಡು ತುಂಡಾಗೇ ಇದ್ದು ಮುಂದೆ ಬೆನ್ನೆಲುಬಿನ ಕಾಯವಾಗುತ್ತದೆ. ಸ್ನಾಯುಪಡಿಗಳ ನಡುವೆ ಇದರ ಪಕ್ಕಗಳಿಂದ ಹೊರಟಿಕೊಳ್ಳುವ 

ಚಾಚುಗಳೇ ಮುಂದೆ ಪಕ್ಕೆಲುಬುಗಳಾಗುವುವು. ಆದರೆ ಮುಂದೆ ಪಕ್ಕೆಲುಬುಗಳ ವಿಕಾಸ ಆಗುವುದು ಎದೆಗೂಡಿನ ಮಟ್ಟದಲ್ಲಿ ಮಾತ್ರ. ಉಳಿದೆಡೆಗಳಲ್ಲಿ ನೆಪಮಾತ್ರಕ್ಕೆ ಉಳಿಯುತ್ತವೆ. ಪಿಂಡಗೂಸಿನಲ್ಲಿ 7ನೆಯ ವಾರದ ಹೊತ್ತಿಗೇ ಬೆನ್ನೆಲುಬುಗಳು ಮೆಲ್ಲೆಲುಬುಗಳಾಗಿರುತ್ತವೆ. 

ಇನ್ನೆರಡು ವಾರಗಳಲ್ಲಿ ಎಲುಮೊಳೆತದ (ಆಸಿಫಿಕೇಷನ್) ಕೇಂದ್ರಗಳು ತಲೆದೋರಿ ಬರುಬರುತ್ತ ಮೆಲ್ಲೆಲುಬೆಲ್ಲ ಎಲುಬಾಗಿ ಮಾರ್ಪಡುತ್ತದೆ. ಪಕ್ಕೆಲುಬುಗಳ ಬೆಳೆವ ಮುಂಗೊನೆಗಳ ಮೆಲ್ಲೆಲುಬಿಂದ ಎದೆ ಚಕ್ಕೆಯ ಕಡ್ಡಿ ಬೆಳೆದು ಮುಂದೆ ಅದೇ ಎದೆಚಕ್ಕೆ ಆಗುತ್ತದೆ.
ಪಿಂಡದ 5ನೆಯ ವಾರದ ಹೊತ್ತಿಗೆ ಕೈಕಾಲುಗಳ ಎಲುಗಟ್ಟು ಅಡಿಯ ಅವಯವ ಮೊಳಕೆಯ ನಡುರಚಾಂಶದ (ಮೀಸೆಂಕೈಮಲ್) ತಿರುಳಿನಲ್ಲಿ ತುಂಡಾಗದ ನಡುನನೆ ಚರ್ಮದಿಂದಲೇ ವಿಕಾಸವಾಗುತ್ತದೆ. ನಡುರಚಾಂಶ ಗಟ್ಟಿಬಿದ್ದು ಮುಂದಿನ ಅವಯವದ 

ಮೂಳೆಗಳೇಳುವುವು. 7ನೆಯ ವಾರದಲ್ಲಿ ನಡುರಚಾಂಶವೇ ಮುಂದಿನ ಮೂಳೆಗಳು ಮೆಲ್ಲೆಲುಬುಗಳಾಗಿರುವುವು. ಮುಂದೆ ಎಲುಬಾಗಿ ಬದಲಾದ ಮೇಲಿನ ಆಕಾರ, ಗಾತ್ರಗಳಿಗೆ ಬಹುಮಟ್ಟಗೆ ಈ ಮೆಲ್ಲೆಲುಬುಗಳೇ ಕಾರಣ. ಹಾಗೇ, ಕೈ ಕಾಲುಗಳ ವಿಕಾಸಕ್ಕೆ ಮುಂಚೆಯೇ 

ಹೆಗಲಿನ, ಟೊಂಕದ ನಡುಕಟ್ಟುಗಳು ಮೊಳೆಯುತ್ತವೆ. ಇದರಲ್ಲಿ ಹೆಗಲಿನದೇ ಮೊದಲ ಮೊಳೆತ. ಮೈಗೆ ಹತ್ತಿರದಲ್ಲಿರುವ ಮೂಳೆಗಳು ಮೊದಲು ಕುಡಿಯಿಡುತ್ತವೆ. 
ಎಲುಮೊಳೆತ: ಮೆಲ್ಲೆಲುಬೊಳಗೋ ಪದರ ನಡುವೆಯೋ ಆಗಬಹುದು, ಇವೆರಡು ಮೊಳೆತಗಳೂ ಒಂದೇ ರೀತಿ. ಏಕೆಂದರೆ, ಇದರಲ್ಲಿ ಪಾಲ್ಗೊಳ್ಳುವ ಜೀವ ಕಣಗಳು ಒಂದೇ ಬಗೆಯವು. ತಲೆಬುರುಡೆಯ ಕೆಲವನ್ನೂ ಕೀಲಿಕವನ್ನೂ ಬಿಟ್ಟರೆ, ಎಲುಗಟ್ಟಿನ ಎಲ್ಲ ಮೂಳೆಗಳಿಗೂ 

ಮೊದಲು ಮೆಲ್ಲಲುಬಾಗಿದ್ದುದರಲ್ಲೇ ಎಲುಬು ಮೊಳಯುತ್ತದೆ. ಇಲ್ಲಿ ಮೆಲ್ಲೆಲುಬು ನೇರವಾಗಿ ಎಲುಬಾಗಿ ಮಾರ್ಪಡದೆ, ಮೆಲ್ಲಲುಬಲ್ಲಿ ಸುಣ್ಣಗೂಡಿ, ಸವೆಗೋರಿ (ಎರೋಷನ್) ಎಲುಬಿನ ಮರುಜೋಡಣೆಯಾಗುವುದು. ಇಷ್ಟಾದರೂ, ವಯಸ್ಸಾದರೂ ಕೆಲವು ಮೆಲ್ಲೆಲುಬುಗಳು 

ಎಲುಬಾಗದೆ ಹಾಗೇ ಉಳಿದಿರುತ್ತವೆ.
ಪ್ರಾಣಿಗಳಲ್ಲಿ (ಕಶೇರುಕಗಳು) ಎಲುಗಟ್ಟು: ಕಶೇರುಕಗಳಲ್ಲಿ ಎಲುಗಟ್ಟಿನ ಬೆಳೆವಣಿಗೆ ಅಕಶೇರುಕಗಳಿಗಿಂತ ವಿಭಿನ್ನರೀತಿಯದು. ಈ ವಂಶದ ಜೀವಿಗಳ ಎಲುಗಟ್ಟು ಭ್ರೂಣ ಬೆಳವಣಿಗೆಯ ಕಾಲದಲ್ಲಿ ಮಧ್ಯಚರ್ಮದಿಂದ (ಮೀಸೊಡರ್ಮ್) ಹುಟ್ಟಿಬರುತ್ತದೆ. ಇದು ಬೆಳೆದು ಬರುವ 

ರೀತಿಗಳನ್ನು ಎಲ್ಲ ಕಶೇರುಕಗಳ ಭ್ರೂಣಾಭ್ಯಾಸದಿಂದ ಅರಿತುಕೊಳ್ಳಬಹುದು. ಕಶೇರುಕಗಳಲ್ಲಿ ಎಲುಗಟ್ಟು ಮೂರು ಹಂತಗಳಲ್ಲಿದೆ. ಕೆಳದರ್ಜೆಯ ಕಶೇರುಕಗಳಾದ ಆಂಘಿಯಾಕ್ಸಿಸ್, ಬೆಲನೊಗ್ಲಾಸಸ್ ಮತ್ತು ಅಸಿಡಿಯಾಗಳ ಎಲುಗಟ್ಟನ್ನು ನೊಟೊಕಾರ್ಡ್ ಎಂದು 

ಕರೆಯುತ್ತೇವೆ. ಇದು ಜೀರ್ಣಾಂಗಗಳಿಂದ ಮೇಲುಭಾಗದಲ್ಲಿದೆ; ಇದರ ಹುಟ್ಟು ಪ್ರತ್ಯೇಕವಾದ ಒಂದು ಅಂಗಾಂಶದಿಂದ (ನೊಟೊಕಾರ್ಡಿನ ಅಂಗಾಂಶವೆಂದೇ ಹೆಸರು). ಬೆಲನೊಗ್ಲಾಸಸ್ ಜೀವಿಯಲ್ಲಿ ನೊಟೊಕಾರ್ಡ್ ಶರೀರದ ಮುಂದಿನ ತುದಿಯಲ್ಲಿದೆ. ಅಸೀಡಿಯಗಳಲ್ಲಿ 

ಇದು ಇರುವುದೇ ಇಲ್ಲ. ಆದರೆ ಇವುಗಳ ಲಾರ್ವಗಳಲ್ಲಿ ಮಾತ್ರ ನೊಟೊಕಾರ್ಡ್ ಬೆಳೆಯುತ್ತದೆ. ಇವುಗಳ ಬಾಲದಲ್ಲಿ ಮಾತ್ರ ರೂಪಾಂತರ ಪರಿವರ್ತನೆಗೊಂಡಾಗ ಈ ನೊಟೊಕಾರ್ಡ್ ಕರಗಿಹೋಗುತ್ತದೆ. ಇದು ಕಶೇರುಕಗಳ ಎಲುಗಟ್ಟಿನ ಬೆಳೆವಣಿಗೆಯ ಪ್ರಥಮ ಹಂತ.
ಇವುಗಳಿಗಿಂತ ಮುಂದುವರಿದ ಸೈಕ್ಲೊಸ್ಟೊಮ್ಯಾಟ ಪ್ರಾಣಿಗಳಲ್ಲಿಯೂ ನೊಟೊಕಾರ್ಡಿನ ಬೆಳೆವಣಿಗೆಯನ್ನು ಕಾಣುತ್ತೇವೆ. ಇವುಗಳಲ್ಲಿ ನೊಟೊಕಾರ್ಡ್ ಮತ್ತು ಅದರ ಮೇಲಿರುವ ಕವಚ ಪ್ರಾಣಿಗಳ ಜೀವಪರ್ಯಂತ ಇರುವುದು ಕಂಡುಬರುತ್ತದೆ. ಆದರೆ ಇದರ 

ನೊಟೊಕಾರ್ಡಿನ ಮೇಲೆ ಮೃದ್ವಸ್ಥಿಯಿಂದಾದ ನರದ ಕಮಾನುಗಳಿವೆ. ಕೆಲವು ಅಸ್ಥಿಮತ್ಸ್ಯಗಳಲ್ಲಿ ಅಂದರೆ ಆಸಿಪೆನ್ಸರ್ ಮೀನಿನಲ್ಲಿ ವಯಸ್ಕ ಜೀವಿಗಳಲ್ಲಿಯೂ ನೊಟೊಕಾರ್ಡ್ ಉಳಿದುಬಂದಿರುವುದು ಕಾಣುತ್ತದೆ. ಇದರ ನೊಟೊಕಾರ್ಡಿನ ಮೇಲೆ 

ತಂಪುಗಳನ್ನೊಳಗೊಂಡಿರುವ ಕವಚವೂ ಅದರ ಮೇಲೆ ಮೃದ್ವಸ್ಥಿಯಿಂದಾದ ನರದ ಕಮಾನು ಮತ್ತು ರಕ್ತನಾಳದ ಕಮಾನುಗಳೂ ಇವೆ. ಸೈಕ್ಲೊಸ್ಟೊಮುಗಳನ್ನುಳಿದು ಮುಂದುವರಿದಿರುವ ಮತ್ಸ್ಯವರ್ಗದ ಪ್ರಾಣಿಗಳಲ್ಲಿ ನೊಟೊಕಾರ್ಡ್ ಮಾಯವಾಗಿ ಕೋಮಲಾಸ್ಥಿ ಮತ್ತು 

ನಿಜಾಸ್ಥಿಗಳು ಬೆಳೆದಿರುವುದು ಕಾಣುತ್ತದೆ. ಕಶೇರುಕಗಳ ಏಕಾಸದ ಹಾದಿಯಲ್ಲಿ ಕೋಮಲಾಸ್ಥಿ ಬೆಳವಣಿಗೆ ಎರಡನೆಯ ಹಂತ ಮತ್ತು ನಿಜಾಸ್ಥಿ ಬೆಳೆವಣಿಗೆ ಮೂರನೆಯ ಹಂತ. ಕೋಮಾಲಸ್ಥಿ ಮೊದಲು ಹುಟ್ಟತೋ ಅಥವಾ ನಿಜಾಸ್ಥಿ ಮೊದಲು ಹುಟ್ಟಿತೊ ಎಂಬ ಬಗ್ಗೆ ವಾದ 

ವಿವಾದಗಳಿವೆ. ಇದಿನ್ನೂ ತೀರ್ಮಾನವಾಗದಿರುವ ವಿಚಾರ.
ಷಾರ್ಕ್ ಮೀನು ರೇಮೀನುಗಳು ಮತ್ತು ಅವುಗಳ ಸಂಬಂಧಿಗಳಲ್ಲಿ ಎಲುಗಟ್ಟು ಕೋಮಲಾಸ್ಥಿಯಿಂದಾಗಿದೆ. ಆದರೆ ಭ್ರೂಣ ಬೆಳೆವಣಿಗೆಯ ಕಾಲದಲ್ಲಿ ಇವುಗಳಲ್ಲಿಯೂ ನೊಟೊಕಾರ್ಡ್ ಬೆಳೆದುಕೊಳ್ಳುತ್ತದೆ. ಮುಂದೆ ಭ್ರೂಣ ಬೆಳೆದಂತೆ ನೊಟೊಕಾರ್ಡ್ ಮಾಯವಾಗಿ ಅದರ 

ಸ್ಥಾನವನ್ನು ಕೋಮಲಾಸ್ಥಿ ಆಕ್ರಮಿಸುತ್ತದೆ. ಕೋಮಲಾಸ್ಥಿಯಲ್ಲಿ ಕಾಂಡ್ರಿಸ್ ಎಂಬ ರಾಸಾಯನಿಕವಸ್ತುವಿದೆ. ಅಸ್ಥಿ ಮತ್ಸ್ಯಗಳಲ್ಲಿ ಕಶೇರು ಪುರ್ಣವಾಗಿ ಮೂಳೆ ಅಥವಾ ನಿಜಾಸ್ಥಿಯಿಂದಲೇ ಆಗಿದೆ. ಇದು ಕೋಮಲಾಸ್ಥಿಗಿಂತ ವಿಭಿನ್ನವಾಗಿದ್ದು ಮೂಳೆ ಸುಣ್ಣ ಮತ್ತು ರಂಜಕದ 

ಲವಣಗಳನ್ನೊಳಗೊಂಡಿರುತ್ತದೆ. ಇವುಗಳ ರೆಕ್ಕೆಗಳಲ್ಲಿರವ ರಚನೆಗಳು ಕೂಡ ಮೂಳೆಯಿಂದಲೇ ಆಗಿವೆ. ಮತ್ಸ್ಯವರ್ಗದ ಕಶೇರು ಮಣಿಗಳ ಮೇಲೆ ನರದ ಕಮಾನು ಮತ್ತು ರಕ್ತನಾಳದ ಕಮಾನುಗಳಿರುವುದರಿಂದ ನರಹುರಿ ಮತ್ತು ರಕ್ತನಾಳಗಳಿಗೆ ರಕ್ಷಣೆಯೊದಗುತ್ತದೆ. 

ಕಮಾನುಗಳು ಒಂದರ ಹಿಂದೆ ಒಂದರಂತೆ ಜೋಡಿಸಿಕೊಂಡ ಒಂದು ನಾಳದಂತೆಯೇ ಇರುವ ಸ್ಥಳಾವಕಾಶಗಳನ್ನು ಕಲ್ಪಿಸಿ ಕೊಡುತ್ತವೆ. ಕಶೇರುವಿನ ಮೇಲೆ ಇರುವ ನಾಳದೊಳಗೆ ನರಹುರಿ ಇದೆ. ಕಶೇರುವಿನ ಕೆಳಗಿರುವ ನಾಳದಲ್ಲಿ ರಕ್ತನಾಳವಿದೆ.
ದ್ವಿಚರಿ ವರ್ಗದ ಪ್ರಾಣಿಗಳ ಎಲುಗಟ್ಟಿನಲ್ಲಿ ನಿಜಾಸ್ಥಿ ಮತ್ತು ಕೋಮಲಾಸ್ಥಿಗಳೆರಡೂ ಇವೆ. ಕಶೇರುಕಗಳಲ್ಲಿ ಕಶೇರುಮಣಿಗಳ ಉಗಮ ಭ್ರೂಣದಲ್ಲಿರುವ ಖಂಡಗಳಿಗನುಸಾರವಾಗಿದೆ. ಕಶೇರುಮಣಿಯ ಪುರ್ಣ ಬೆಳವಣಿಗೆಯಾದ ಮೇಲೆ ಒಂದು ಕಶೇರುಮಣಿಗೂ ಮತ್ತೊಂದು 

ಕಶೇರುಮಣಿಗೆ ಸಂಬಂಧ ಕಲ್ಪಿಸಲು ಬೇಕಾದ ರಚನೆಗಳು ಕಶೇರುಮಣಿಯಲ್ಲಿಯೇ ಹುಟ್ಟುತ್ತವೆ. ಕಶೇರುವಿನಲ್ಲಿರುವ ಪ್ರಥಮ ಕಶೇರುಮಣಿಯೊಡನೆ ತಲೆಯ ಬುರುಡೆ ಕೀಲಿಸಿಕೊಳ್ಳುತ್ತದೆ. ಪ್ರಥಮ ಕಶೇರುಮಣಿಗಳ ಹಿಂದಿರುವ ಕಶೇರುಮಣಿಗಳಿಗೆ ಕುತ್ತಿಗೆಯ 

ಕಶೇರುಮಣಿಗಳೆಂದು ಹೆಸರು. ಇವುಗಳ ಸಂಖ್ಯೆ ಪ್ರತಿವರ್ಗದ ಜೀವಿಗಳಲ್ಲಿ ಬದಲಾಗುತ್ತದೆ. ಸ್ತನಿಗಳಲ್ಲಿ ಸಾಮಾನ್ಯವಾಗಿ 7 ಕುತ್ತಿಗೆಯ ಕಶೇರುಮಣಿಗಳಿವೆ. ಆದರೆ ಇದೇ ವರ್ಗಕ್ಕೆ ಸೇರಿದ ಸ್ಲಾತ್ಪ್ರಾಣಿಗಳಲ್ಲಿ ಇವುಗಳ ಸಂಖ್ಯೆ ಬೇರೆಯಲ್ಲ. ಮೂರು ಬೆರಳಿರುವ ಸ್ಲಾತ್ಪ್ರಾಣಿಯಲ್ಲಿ 

ಇವುಗಳ ಸಂಖ್ಯೆ 9 ಅಥವಾ 10. ಒಂದೇ ಬೆರಳಿರುವ ಸ್ಲಾತಿನಲ್ಲಿ 6. ಪಕ್ಷಿಗಳ ಕುತ್ತಿಗೆಯ ಕಶೇರುಮಣಿಗಳಲ್ಲಿಯೂ ಈ ವ್ಯತ್ಯಾಸಗಳನ್ನು ಕಾಣಬಹುದು. ಕುತ್ತಿಗೆಯ ಚಲನೆಗೆ ತಕ್ಕಂತೆ ಇವುಗಳಲ್ಲಿ ಕಶೇರುಮಣಿಗಳ ಸಂಖ್ಯೆಯಲ್ಲಿ ವ್ಯತ್ಯಾಸಗಳಿವೆ. ಹಂಸದಲ್ಲಿ 25 

ಕಶೇರುಮಣಿಗಳಿವೆ.
ಸರೀಸೃಪಗಳು, ಪಕ್ಷಿಗಳು ಮತ್ತು ಸ್ತನಿಗಳ ಎಲುಗಟ್ಟು ಪುರ್ಣವಾಗಿ ನಿಜಾಸ್ಥಿಯಿಂದಲೇ ಆಗಿದೆ. ಕೋಮಲಾಸ್ಥಿ ಕೇವಲ ಕೀಲುಗಳಲ್ಲಿ ಹೊರಕಿವಿಯಲ್ಲಿ ಶ್ವಾಸನಾಳ ಮುಂತಾದ ಭಾಗಗಳಿಗೆ ಮೀಸಲಾಗಿದೆ. ಸರೀಸೃಪಗಳಿಂದ ಪ್ರಾರಂಭವಾಗಿ ಸಸ್ತನಿಗಳವರೆಗೆ ಬೆನ್ನೆಲುಬಿನ 

ಕೆಲವು ಮೂಳೆಗಳಲ್ಲಿ ಬಗ್ಗರಿ ಮೂಳೆಗಳ ಬೆಳೆವಣಿಗೆಯನ್ನು ಕಾಣಬಹುದು. ಕುತ್ತಿಗೆಯಿಂದ ಕೆಳಗಿರುವ ಭಾಗದಲ್ಲಿರುವ ಕೆಲವು ಕಶೇರುಮಣಿಗಳಿಂದ ಹೊರಟಿರುವ ಬೆಳೆವಣಿಗೆಗಳ ಜೊತೆಗೆ ಈ ಬಗ್ಗರಿ ಮೂಳೆಗಳು ಸೇರಿಕೊಂಡಿರುವುದರಿಂದ ಎದೆಯ ಭಾಗಕ್ಕೆ ಪುರ್ಣ 

ರಕ್ಷಣೆಯೊದಗುತ್ತದೆ. ಶ್ವಾಸಕೋಶಗಳು ಮತ್ತು ಹೃದಯಕ್ಕೆ ಇವುಗಳಿಂದ ರಕ್ಷಣೆ ಸಿಕ್ಕಿದೆ. ಈ ಬಗ್ಗರಿ ಮೂಳೆಗಳಿಂದ ಉಸಿರಾಟಕ್ಕೂ ಬಹಳ ಸಹಾಯವಾಗಿದೆ.
ಬೆನ್ನುಮೂಳೆಗೆ ಸೊಂಟದ ಮೂಳೆಗಳು, ಕೀಲಿಸಿಕೊಂಡಿವೆ. ಪಕ್ಷಿಗಳಲ್ಲಿ ಸೊಂಟದ ಮೂಳೆಗಳೂ ಸಂಪುರ್ಣವಾಗಿ ಬೆನ್ನು ಮೂಳೆಯೊಡನೆ ಬೆರೆತುಹೋಗಿ ಸಿನ್ಸೇಕ್ರಮ್ ಎಂಬ ಹೊಸಭಾಗವೇ ಆಗಿದೆ. ಸೊಂಟದ ಮೂಳೆಗಳಿಗೆ ಕಾಲುಗಳು ಕೀಲಿಸಿಕೊಂಡಿದೆ. ಕೆಲವು 

ಸರೀಸೃಪಗಳ ಬಾಲದ ಭಾಗದಲ್ಲಿರುವ ಕಶೇರುಮಣಿಗಳಲ್ಲಿರುವ ರಕ್ತನಾಳದ ಕಮಾನಗಳು ಬೇರ್ಪಟ್ಟಿವೆ. ಈ ಮೂಳೆಗಳಿಗೆ ಚವರಾನ್ ಮೂಳೆಗಳೆಂದು ಹೆಸರು. ಇಂಥವನ್ನು ಮೊಸಳೆಯ ಬಾಲದಲ್ಲಿ ನೋಡಬಹುದು. ಪಕ್ಷಿಗಳಲ್ಲಿ ಬಾಲದ ಕಶೇರುಮಣಿಗಳೆಲ್ಲವೂ ಒಂದು 

ಗೂಡಿ ಪೈಗೋಸ್ಟೈಲ್ ರಚನೆಯನ್ನು ಕೊಟ್ಟಿವೆ. ಇದು ಬಾಲಕ್ಕೆ ಆಸರೆಯನ್ನೊದಗಿಸುತ್ತದೆ.
ಭುಜದ ಮೂಳೆಗಳು ಕಶೇರುವಿನೊಡನೆ ಕೀಲಿಸಿಕೊಂಡಿರುವುದಿಲ್ಲ. ಬದಲಾಗಿ ಇವು ಎದೆಯ ಮೂಳೆಗಳೊಡನೆ ಸಂಬಂಧ ಕಲ್ಪಿಸಿಕೊಂಡಿವೆ. ಈ ಭುಜದ ಮೂಳೆಗಳಿಗೆ ಕೈಗಳು ಕೀಲಿಸಿಕೊಳ್ಳುತ್ತವೆ. ಪಕ್ಷಿಗಳಲ್ಲಿ ಎದೆಯ ಮೂಳೆ ತ್ರಿಕೋನಾಕೃತಿಯಲ್ಲಿರುವ ಕೀಲ್ ಎಂಬ 

ಭಾಗವನ್ನು ಬೆಳೆಸಿಕೊಂಡಿದೆ. ಈ ಭಾಗಕ್ಕೆ ಹಾರಲು ಸಹಾಯಕವಾಗಿರುವ ಮಾಂಸಖಂಡಗಳೂ ಅಂಟಿಕೊಂಡಿವೆ.
ಸ್ತನಿಗಳ ಕಶೇರುಮಣಿಗಳ ಮಧ್ಯೆ ಕೋಮಲಾಸ್ಥಿಯಿಂದಾದ ತಟ್ಟಗಳಿವೆ. ಇವುಗಳ ಬಾಲದಲ್ಲಿರುವ ಕಶೇರುಮಣಿಗಳ ಸಂಖ್ಯೆ ವ್ಯತ್ಯಾಸಗೊಳ್ಳುತ್ತದೆ. ಬಾವಲಿಗಳಲ್ಲಿ ಬಾಲದ ಕಶೇರುಮಣಿಯಿಲ್ಲ. ಆದರೆ ಪಂಗೊಲಿನ್ ಪ್ರಾಣಿಯಲ್ಲಿ 49 ಕಶೇರುಮಣಿಗಳಿವೆ. ಹೀಗೆ 

ಕಶೇರುವಿನಲ್ಲಿರುವ ಮಣಿಗಳ ಸಂಖ್ಯೆ ಕೆಲವು ಪ್ರಭೇದಗಳಲ್ಲಿ ಬದಲಾಗುತ್ತದೆ.
ಸ್ತನಿಗಳ ಎದೆಯ ಮೂಳೆ ನಾನಾ ಭಾಗಗಳಿಂದಾಗಿದೆ. ಇದರಲ್ಲಿ ಪ್ರೀಸ್ಟರ್ನಂ ಮೀಸೊಸ್ಟೆರ್ನಂ ಕ್ಸಿಫಿಸ್ಟೆರ್ನಂ ಎಂಬ ಭಾಗಗಳಿವೆ. ಈ ಎದೆಯ ಮೂಳೆಗೆ ಬಗ್ಗರಿ ಮೂಳೆಗಳೂ ಕೀಲಿಸಿಕೊಳ್ಳುತ್ತವೆ.	(ಎಲ್.ಎಸ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ